ಪುತ್ತೂರು: ಕಳೆದ ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿನ ಬಸ್ಸು ತಂಗುದಾಣದಲ್ಲಿ ವಾಸ್ತವ್ಯವನ್ನು ಹೂಡಿದ್ದ ಸುಮಾರು 50 ವರ್ಷ ಪ್ರಾಯದ ಕಮಲ ಎಂಬ ಮಹಿಳೆಯನ್ನು ಪ್ರಾಧ್ಯಾಪಕಿ ಗೀತಾ ಕೊಂಕೋಡಿ ಅವರ ವಿನಂತಿಯ ಮೇರೆಗೆ ಪುತ್ತೂರು ರೋಟರಿ ಕ್ಲಬ್ ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಗ್ರಾಮಸ್ಥರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.
ಈ ಮಾನಸಿಕ ಅಸ್ವಸ್ಥ ಮಹಿಳೆಯು ಬಸ್ಸು ತಂಗುದಾಣದಲ್ಲಿ ವಾಸ್ತವ ಹೂಡಿರುವ ಕಾರಣ ಕೆಲವೊಮ್ಮೆ ಈಕೆ ಮಾಡುವ ಹಾವಭಾವಗಳಿಂದ ಶಾಲೆಗೆ ಹೋಗುವ ಮಕ್ಕಳಿಗೆ ಈ ತಂಗುದಾಣದಲ್ಲಿ ನಿಲ್ಲಲು ಭಯವಾಗುತ್ತಿದ್ದು, ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಾರ್ವಜನಿಕರು ದೂರು ನೀಡಿದ್ದರು.
ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಗೋಕುಲದಾಸ್ ಭಕ್ತ, ಉಪಾಧ್ಯಕ್ಷ ಪದ್ಮನಾಭ ಸಾಪಲ್ಯ, ಸದಸ್ಯರಾದ ಭಾಗೀರಥಿ , ಪುಷ್ಪಾವತಿ, ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವಿಟ್ಲ ಘಟಕದ ಮೇಲ್ವಿಚಾರಕಿ ಸೋಮಕ್ಕ, ಅಂಗನವಾಡಿ ಕಾರ್ಯಕರ್ತೆ ಕುಸುಮ, ಕೃಷಿಕ ಸುಬ್ರಾಯ ಭಟ್ ಕೊಂಕೋಡಿ, ಮಾನಸಿಕ ಅಸ್ವಸ್ಥತೆಯ ಅಕ್ಕನ ಮಗ ಸತೀಶ ಹಾಗೂ ಗ್ರಾಮಸ್ಥರು ಸಹಕರಿಸಿದರು. ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಪುತ್ತಿಲ ಪರಿವಾರದ ಆಂಬುಲೆನ್ಸ್ ಸೇವೆಯನ್ನು ಸುಜಿತ್ ಅವರು ನೀಡಿದರು.
ಈ ಮಾನಸಿಕ ಅಸ್ವಸ್ಥೆ ಕಮಲ ಎಂಬ ಅವರ ತಾಯಿ ಮಚ್ಚುಳು ಎಂಬಾಕೆ ನಮ್ಮ ಮನೆಯಲ್ಲಿ ಅನೇಕ ವರ್ಷಗಳಿಂದ ಮನೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಆಕೆ ಆರು ತಿಂಗಳ ಹಿಂದೆ ಮೃತಪಟ್ಟಿದ್ದು, ಸಾಯುವ ಸಮಯದಲ್ಲಿ ತನ್ನ ಮಾನಸಿಕ ಅಸ್ವಸ್ಥ ಮಗಳು ದಾರಿಯಲ್ಲಿ ಬೆಳೆಯದಂತೆ ನೋಡಿಕೊಂಡು ಒಂದು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿ ಕೇಳಿಕೊಂಡ ಮೇರೆಗೆ ಸಮಾಜ ಸೇವಕ ಪುತ್ತೂರು ಉಮೇಶ್ ನಾಯಕ್ ಅವರ ಸಹಕಾರದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದೇನೆ. ಆಕೆಯ ತಾಯಿಗೆ ನೀಡಿದ ಮಾತನ್ನು ನೆರವೇರಿಸಿದ ಸಾರ್ಥಕ್ಯವಿದೆ ಎಂದು ಗೀತಾ ಕೊಂಕೋಡಿ ತಿಳಿಸಿದ್ದಾರೆ.