ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಮಿತಿ ಸಭೆ ಪುತ್ತೂರಿನ ದರ್ಬೆಯಲ್ಲಿರುವ ಶ್ರೀರಾಮ ಸೌಧದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ಆವರಣದಲ್ಲಿ ನಡೆಯಿತು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ.ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತೀ ತಾಲೂಕುಗಳಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಗಳನ್ನು ಸರದಿಯಂತೆ ನಡೆಸಲು ನಿರ್ಧರಿಸಲಾಯಿತು. .
ಕಳೆದ ತಿಂಗಳು ಉಜಿರೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಗೌರವ ಕಾರ್ಯದರ್ಶಿ ರಾಜೇಶ್ವರಿ ಸಭೆಗೆ ಓದಿ ಹೇಳಿದರು. ಗೌರವ ಕೋಶಾಧ್ಯಕ್ಷ ಐತಪ್ಪ ನಾಯ್ಕ್, ರಾಜ್ಯ ಕ.ಸಾ.ಪ. ಕಾರ್ಯಕಾರಿ ಸಮಿತಿ ಸದಸ್ಯ ಎಂ.ಕೆ.ಮಾಧವ, ಪುತ್ತೂರು ತಾಲೂಕು ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್, ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪೇರಾಲು, ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಂಟ್ವಾಳ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಯದುಪತಿ ಗೌಡ, ಮೂಡಬಿದ್ರಿ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಸುಂದರ ನಾಯ್ಕ್, ಹರೀಶ್ ಬಂಟ್ವಾಳ್, ರಾಮಚಂದ್ರ ಪಲ್ಲತಡ್ಕ, ದುರ್ಗಾಪ್ರಸಾದ್ ರೈ, ಪೂವಪ್ಪ ನೇರಳಕಟ್ಟೆ, ಸನತ್ ಕುಮಾರ್ ಜೈನ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಹೆಚ್ಚಾಗಿ ವಿದ್ಯಾರ್ಥಿಗಳ ಕಡೆಗೆ ಗಮನಹರಿಸಿ ಮಾಡಬೇಕೆಂದು ನಿರ್ಧರಿಸಲಾಯಿತು. ಪ್ರತೀ ತಾಲೂಕು ಸಮಿತಿಯವರು ತಮ್ಮ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳ ವರದಿ ಮತ್ತು ಭಾವಚಿತ್ರಗಳನ್ನು ಜಿಲ್ಲಾ ಸಮಿತಿಯ ವಾಟ್ಸಾಪ್ ಗುಂಪಿಗೆ ಆಯಾಯ ದಿನವೇ ಹಾಕಬೇಕೆಂದು ನಿರ್ಣಯಿಸಲಾಯಿತು.
ಜಿಲ್ಲಾ ಸಮಿತಿಯ ಸಭೆಗಳಿಗೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ತಾಲೂಕು ಘಟಕಗಳ ಅಧ್ಯಕ್ಷರುಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಅಭಿಪ್ರಾಯಪಟ್ಟು ನಿರ್ಣಯ ಕೈಗೊಳ್ಳಲಾಯಿತು.
ತುಳು ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ದುರ್ಗಾಪ್ರಸಾದ್ ರೈ, ಬ್ಯಾರಿ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಖಾಲಿದ್, ಅರೆಭಾಷೆ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಚಂದ್ರಶೇಖರ ಪೇರಾಲು ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಭಾಜನರಾಗಿರುವ ಮುಲ್ಕಿ ತಾಲೂಕು ಕ.ಸಾ.ಪ. ಅಧ್ಯಕ್ಷ ಮಿಥುನ್ ಉಡುಪ ರವರನ್ನು ಅಭಿನಂದಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.
ಗೌರವ ಕಾರ್ಯದರ್ಶಿ ರಾಜೇಶ್ವರಿ ಸ್ವಾಗತಿಸಿ, ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ವಂದಿಸಿದರು.