ಹುಬ್ಬಳ್ಳಿ : ಲವ್ ಜಿಹಾದ್ ವಿರುದ್ಧ ಶ್ರೀರಾಮಸೇನೆ ಸಹಾಯ ವಾಣಿಗೆ 170ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿದ್ದು, ಅಭಿಯಾನ ಆರಂಭಿಸಿದ ಶ್ರೀರಾಮಸೇನೆ ಮೇಲೆ ಬಾಂಬ್ ಹಾಕುವ ಹಾಗೂ ಜೀವ ತೆಗೆಯುವ ಬೆದರಿಕೆಗಳು ಕೇಳಿಬರುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ಗಂಭೀರ ಆರೋಪ ಮಾಡಿದ್ದಾರೆ.
ಲವ್ ಜಿಹಾದ್ ವಿರುದ್ಧ ಸಮರ ಸಾರಿರುವ ಶ್ರೀರಾಮಸೇನೆ ಮೇ 29 ರಂದು ಸಹಾಯ ವಾಣಿಗೆ ಆರಂಭಿಸಿತ್ತು. ಈ ಸಹಾಯ ವಾಣಿಗೆ ಇದುವರೆಗೆ 1000ಕ್ಕೂ ಅಧಿಕ ಕಾಲ್ ಗಳು ಬಂದಿವೆ. ಇವುಗಳ ಪೈಕಿ 170ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ. ಕಿಡಿಗೇಡಿಗಳು ಇಂಟರ್ನೆಟ್ ಕಾಲ್ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದಾರೆ. ಜೊತೆಗೆ ಶ್ರೀರಾಮಸೇನೆ ಸಂಘಟನೆ ಮುಖಂಡರ ಫೇಸ್ ಬುಕ್ ಅಕೌಂಟ್ ಅನ್ನು ಕೂಡ ಕ್ಲೋಸ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಫೇಸ್ ಬುಕ್ ಬಂದ್ ಆಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆರೋಪ ಮಾಡಿದ್ದಾರೆ.
ಸಂಘಟನೆ ರಾಜ್ಯಾಧ್ಯಕ್ಷ ಸೇರಿ ಎಲ್ಲಾ ಪದಾಧಿಕಾರಿಗಳ ಫೇಸ್ ಬುಕ್ ಬಂದ್ ಆಗಿದೆ. ಸರ್ಕಾರ ಮಾಡಿದೆಯೋ ಅಥವಾ ಬೇರೆಯವ್ರು ಮಾಡಿದ್ದಾರೊ ಗೊತ್ತಿಲ್ಲ. ಲವ್ ಜಿಹಾದ್ ವಿರುದ್ಧ ಅಭಿಯಾನದ ಹಿನ್ನೆಲೆಯಲ್ಲಿ ಈ ಷಡ್ಯಂತ್ರ ಮಾಡಲಾಗಿದೆ. ನಮ್ಮ ಜಾಗೃತಿ ಅಭಿಯಾನ ತಡೆಯಲು ಈ ಕೃತ್ಯ ಎಸಗಲಾಗಿದೆ. ಪ್ರಮೋದ್ ಮುತಾಲಿಕ್, ಸಿದ್ದಲಿಂಗ ಸ್ವಾಮೀಜಿ ಸೇರಿ ಎಲ್ಲರ ಅಕೌಂಟ್ ಬ್ಲಾಕ್ ಮಾಡಲಾಗಿದೆ. 4 ವಿಭಾಗ ಅಧ್ಯಕ್ಷರ, 18 ಜಿಲ್ಲಾ ಅಧ್ಯಕ್ಷರ ಹಾಗೂ ಪ್ರಮುಖ ಕಾರ್ಯಕರ್ತರ ಫೇಸ್ಟುಕ್ ಬಂದ್ ಆಗಿದೆ. ರಾಜ್ಯದಲ್ಲಿ ಎಮರ್ಜೆನ್ಸ್ ವಾತಾವರಣ ನಿರ್ಮಾಣವಾಗಿದೆ ಎಂದು ಗಂಗಾಧರ ಕುಲಕರ್ಣಿ ತಿಳಿಸಿದರು.
ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗ್ತಿದೆ. ರಾಜ್ಯ ಸರ್ಕಾರ ಮಾಡಿದ್ದಲ್ಲಿ ಕಾರಣ ಹೇಳಬೇಕು. ಮಾಡದೇ ಇದ್ದಲ್ಲಿ ಫೇಸ್ ಬುಕ್ ವಿರುದ್ಧ ಕೇಸ್ ಮಾಡಬೇಕು. ಸಂವಿಧಾನ ಬದ್ಧವಾದ ಹಕ್ಕುಗಳನ್ನು ವಾಪಸ್ ಕೊಡಿಸಬೇಕು. ಇದಕ್ಕೆಲ್ಲ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಕಾರಣ. ಎಲ್ಲಾ ಅಕೌಂಟ್ ಗಳನ್ನು ಮರು ಆರಂಭಿಸಬೇಕು. ಇಲ್ಲದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಗಂಗಾಧರ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.