ಪುತ್ತೂರು: ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಮತ್ತು ಉದ್ಘಾಟನಾ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಮಾತನಾಡಿ, ಇಂದಿನ ಎಳೆಯರು ನಾಡಿನ ನಾಳಿನ ನಾಯಕರು. ಆ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಅವರಿಗೆ ಪ್ರಜಾಪ್ರಭುತ್ವದ ನೈಜ ಅನುಭವ, ಮತದಾನದ ಅವಶ್ಯಕತೆ ಹಾಗೂ ಸಂವಿಧಾನ ಬಗೆಗಿನ ಗೌರವ ಶಾಲಾ ಸಂಸತ್ತಿನ ಚಟುವಟಿಕೆಗಳ ಮೂಲಕ ಮೂಡಿಸಬೇಕಾಗಿದೆ. ಪ್ರಜಾಪ್ರಭುತ್ವದ ಆತ್ಮವೇ ಮತದಾನ, ನಾಯಕತ್ವದ ಜವಾಬ್ದಾರಿ ಕರ್ತವ್ಯದ ಕಾಳಜಿ ಮಕ್ಕಳಲ್ಲಿ ಜಾಗೃತಗೊಳ್ಳಲಿ ಎಂದರು.
ಬೆಥನಿ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ಮಕ್ಕಳಿಗೆ ಪ್ರಮಾಣವಚನ ನೆರವೇರಿಸಿದರು. ಶಿಕ್ಷಕಿಯರಾದ ಜೆನಿಫರ್ ಮೊರಾಸ್ ಸ್ವಾಗತಿಸಿ, ಭಗಿನಿ ರೀಮಾ ಬಿ.ಎಸ್. ವಂದಿಸಿದರು. ಹೇಮಲತಾ, ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.