ನರೇಂದ್ರ ಪ.ಪೂ. ಕಾಲೇಜಿನಲ್ಲಿ ಯುವಜನತೆ ಮತ್ತು ಭಾರತೀಯತೆ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ

ಪುತ್ತೂರು: ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ಅಲ್ಲಿಯ ಯುವಶಕ್ತಿಯ ಕೊಡುಗೆ ನಿರ್ಣಾಯಕ, ಸಂಶೋಧನೆಗಳು, ಹೊಸತನದ ಹುಡುಕಾಟಗಳು, ಅನ್ವೇಷಣೆ, ಆವಿಷ್ಕಾರಗಳು-ಹೀಗೆ ಎಲ್ಲ ರಂಗಗಳಲ್ಲೂ ಯುವಜನತೆಯ ಉತ್ಸಾಹ, ಪ್ರಾಮಾಣಿಕತೆ ಹಾಗೂ ಸಾಹಸಗಳೇ ದೇಶಗಳ ನಿಜವಾದ ಬಂಡವಾಳವಾಗಿವೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ಗಣರಾಜ್ ಭಟ್‍ ಕೆದಿಲ ಹೇಳಿದರು.

ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆದ ಯುವಜನತೆ ಮತ್ತು ಭಾರತೀಯತೆ ಎಂಬ ವಿಚಾರದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರೇ ದೇಶದ ಶಕ್ತಿ. ಇವರು ತಮ್ಮ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳನ್ನು ಉಪಯೋಗಿಸಿಕೊಂಡು, ಸೃಜನಶೀಲತೆಯಿಂದ ಮುಂದುವರಿದರೆ ದೇಶದ ಸಂಪತ್ತಾಗುತ್ತಾರೆ. ಇವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ ಭವಿಷ್ಯ ಅಡಗಿದೆ ಎಂಬ ಮಾತು ಚಿರಸತ್ಯ. ಶಕ್ತಿಶಾಲಿ, ಉತ್ಸಾಹಿ, ಚೈತನ್ಯಯುಕ್ತ ಯುವಜನರಿಂದಲೇ ದೇಶಕಟ್ಟುವ ಕಾರ್ಯವಾಗಬೇಕು. ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆ  ತಮ್ಮ ಬದುಕಿನ ಭಾಗವಾಗಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು. ದೇಶದ ರಕ್ಷಣೆ ಹಾಗೂ ತಮ್ಮ ರಕ್ಷಣೆಯನ್ನು ಕಾಯ್ದುಕೊಳ್ಳುವಲ್ಲಿ ಯುವಕರು ಸಂಘಟಕರಾಗಬೇಕು ಎಂದು ಹೇಳಿದರು.







































 
 

ಯುವಕರು ಆಧುನಿಕತೆ ಮತ್ತು ತಾಂತ್ರಿಕತೆಯ ಹರಿಕಾರರು. ನಿರ್ಭೀತಿ, ಆತ್ಮವಿಶ್ವಾಸ ಧೈರ್ಯ, ಸ್ಥೈರ್ಯ ಮತ್ತು ಶ್ರಮಗಳ ಸಂಗಮ.ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುವ ಸಲುವಾಗಿ ಯುವಕರು ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಂಪಾದಿಸಬೇಕು. ವಿವಿಧ ಕೌಶಲಗಳನ್ನು ಕಲಿತು, ಯೋಗ್ಯತೆ ಹೆಚ್ಚಿಸಿಕೊಳ್ಳಬೇಕು. ಕೌಟುಂಬಿಕ, ಸಾಮಾಜಿಕ, ಔದ್ಯೋಗಿಕ, ಸಾರ್ವತ್ರಿಕ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿ ಶ್ರೇಷ್ಠತೆಗೆ ಬೇಕಾಗಿರುವ ಕೌಶಲಗಳನ್ನು ಪಡೆದುಕೊಳ್ಳಬೇಕು. ಕಾಲಹರಣ ಮಾಡದೆ, ಕಾರ್ಯಕ್ಷಮತೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು  ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಗಮ್ಯ ಸ್ವಾಗತಿಸಿ, ಹರಿಣಿ ವಂದಿಸಿದರು.  

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top