ಪುತ್ತೂರು: ಮಂಗಳೂರು ಕೃಷಿಕರ ಸಹಕಾರ ಸಂಘದ ವತಿಯಿಂದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಹಕಾರದೊಂದಿಗೆ 10ನೇ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ಜು.9 ಮಂಗಳವಾರ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಮಂಗಳೂರು ಮಾಸ್ ಲಿಮಿಟೆಡ್ ನ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಡಿಕೆ ಬೆಳೆಗಾರರಿಗೆ ಅಧಿಕ ದರ ಸಿಗಬೇಕು. ಈ ಕುರಿತು ಮಾಸ್ ಲಿಮಿಟೆಡ್ ಕಾರ್ಯಾಚರಿಸಲಿದೆ. ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ ಅಂಗವಾಗಿ ಮಾರುಕಟ್ಟೆ ದರಕ್ಕಿಂತ ಕೆ.ಜಿ. ಗೆ 2 ರೂ. ಹೆಚ್ಚಳ ನೀಡಲಾಗುವುದು. ಖರೀದಿ ಮಾಡಿದ ಹೆಚ್ಚಿನ ಅಡಿಕೆಗಳನ್ನು ಸಂಸ್ಕರಣೆ ಮಾಡುವ ನಿಟ್ಟಿನಲ್ಲಿ ಸುಳ್ಯ ಶಾಖೆಯಲ್ಲಿ ಎಪಿಎಂಸಿ ವತಿಯಿಂದ ಹೆಚ್ಚುವರಿ ಗೋದಾಮು ಪಡೆದು ಒಂದು ಸುಸಜ್ಜಿತ ಅಡಿಕೆ ಸಂಸ್ಕರಣೆ ವಿಭಾಗ ಶೀಘ್ರದಲ್ಲಿ ಆರಂಭಿಸಲಿದ್ದೇವೆ ಎಂದು ತಿಳಿಸಿದರು.
ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಕಾವು ಸಿ.ಎ.ಬ್ಯಾಂಕ್ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ, ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಸ್ ಲಿಮಿಟೆಡ್ ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್, ಪಿ.ರಾಜಾರಾಮ ಶೆಟ್ಟಿ ಕೊಲ್ಪೆಗುತ್ತು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್ ಕಾವು ಸಿ.ಎ.ಬ್ಯಾಂಕ್ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಉಪಸ್ಥಿತರಿದ್ದರು.