ಉಪ್ಪಿನಂಗಡಿ : ಸಮುದಾಯ ಆರೋಗ್ಯ ಕೇಂದ್ರಗಳು ಜನ ಸ್ನೇಹಿಯಾಗುವ ಮೂಲಕ ಜನರಿಗೆ ಹತ್ತಿರವಾಗಬೇಕು, ಚಿಕಿತ್ಸೆಗೆ ಬರುವ ಪ್ರತೀಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಸಿಗಬೇಕು. ಯಾವುದೇ ಲೋಪ ದೋಷಗಳು ಬಾರದಂತೆ ಎಚ್ಚರವಹಿಸಬೇಕು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಆರೋಗ್ಯ ಕೇಂದ್ರದಲ್ಲಿನ ಸಿಬಂದಿಗಳಿಗೆ ರಕ್ಷಾ ಸಮಿತಿಗೆ ಮಹತ್ತರವಾದ ಜವಾಬ್ದಾರಿ ಇದೆ. ಕೇಂದ್ರಕ್ಕೆ ಬರುವ ಪ್ರತೀಯೊಬ್ಬ ರೋಗಿಗೂ ಸಾಂತ್ವನ ದೊರೆಯಬೇಕು. ಸೌಲಭ್ಯ ಇಲ್ಲ, ವೈದ್ಯರಿರಲಿಲ್ಲ ಎಂಬ ದೂರುಗಳು ಬರಬಾರದು. ಜನರೊಂದಿಗೆ ಬೆರೆಯುವ ಮೂಲಕ ಜನ ಸೇವೆಯನ್ನು ಮಾಡಬೇಕು ಎಂದು ಹೇಳಿದರು.
ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ರ:
ಉಪ್ಪಿನಂಗಡಿಗೆ ಡಯಾಲಿಸಿಸ್ ಕೇಂದ್ತಕ್ಕೆ ಮಂಜೂರಾತಿ ದೊರಕಿದ್ದು ಮುಂದಿನ ದಿನಗಳಲ್ಲಿ ಡಯಾಲಿಸಿಸ್ ಕೇಂದ್ರ ಉಪ್ಪಿನಂಗಡಿ ಸಮುದಾಯ ಕೇಂದ್ರದಲ್ಲಿ ಪ್ರಾರಂಭವಾಗಲಿದೆ. ಶಸ್ತ್ರ ಚಿಕಿತ್ಸಾ ಕೊಠಡಿಯ ಮಂಜೂರು ಮಾಡುವ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಿದ್ದೇನೆ. ಇದಕ್ಕಾಗಿ ಪ್ರಸ್ತಾವವನೆಯನ್ನು ಕಳುಹಿಸಲಾಗಿದೆ. ಉಪ್ಪಿನಂಗಡಿ ಬೆಳೆಯುತ್ತಿರುವ ಪಟ್ಟಣವಾದ್ದರಿಂದ ಇಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಅಗತ್ಯವಿದೆ. ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಇಲ್ಲಿ ಯಾವುದೂ ಇಲ್ಲ ಎಂಬ ಮನೋಭಾವ ಬರಬಾರದು ಎಂದು ಶಾಸಕರು ಹೇಳಿದರು.
ಉಪ್ಪಿನಂಗಡಿಯಲ್ಲಿರುವ ಅಂಬುಲೆನ್ಸ್ ಒಂದು ತಿಂಗಳಲ್ಲಿ ಮೂರು ಸಾರಿ ಓಡಿದೆ, ಇದು ಸಾಕಾ? ಎಂದು ಪ್ರಶ್ನಿಸಿದ ಶಾಸಕರು, ಸರಕಾರ ಉಚಿತವಾಗಿ ಈ ಸೇವೆಯನ್ನು ಜನರಿಗೆ ನೀಡಿದೆ. ಜನರುತುರ್ತು ಸಂದರ್ಭದಲ್ಲಿ ಜನ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ , ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸಿದ್ದಿಕ್ ಕೆಂಪಿ, ಜಯಶೀಲ, ಆನಂದ, ಹಾದಿ ಕೆಂಪಿ, _ಫಾರೂಕ್ ಜಿಂದಗಿ, ವೈದ್ಯರುಗಳಾದ ಡಾ.ಸ್ಮಿತಾ,ಡಾ ಮನೋಜ್ ಉಪಸ್ಥಿತರಿದ್ದರು. ಸಿಬ್ಬಂದಿ ರೇಖಾ ಸ್ವಾಗತಿಸಿದರು. ಗೀತಾ ವಂದಿಸಿದರು. ಪ್ರವೀಣ್ ಮತಾಯಿಸ್ ಕಾರ್ಯಕ್ರಮ ನಿರೂಪಿಸಿದರು.