ಪುತ್ತೂರು: ಕಾಲೇಜಿಗೆ ಸಹಕಾರ ಕೊಡಲು ವಿದ್ಯಾರ್ಥಿ ಸಂಘ ಅತ್ಯಾವಶ್ಯಕ ಎಂಬುದರ ಜತೆಗೆ ಸಂಘಜೀವಿಯಾಗಿ ನಾವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಸಾಧ್ಯ ಎನ್ನುವುದು ಗಮನಾರ್ಹ ವಿಚಾರ. ಹಾಗಾಗಿಯೇ ಕಾಲೇಜಿನ ಬೆಳವಣಿಗೆಗೆ ವಿದ್ಯಾರ್ಥಿ ಸಂಘ ಪೂರಕ ಎಂದು ನ್ಯಾಯವಾದಿ ಚಿದಾನಂದ ಬೈಲಾಡಿ ಹೇಳಿದರು.
ಅವರು ನಗರದ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ವಿದ್ಯಾರ್ಥಿ ನಾಯಕರಿಗೆ ಶಾಲಾ ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು.
ಮಾನವನಿಗೆ ಸಮಸ್ಯೆಗಳಿರುವುದು ಸಾಮಾನ್ಯ. ಚಿತೆಗೆ ಹೋಗುವಲ್ಲಿವರೆಗೆ ಚಿಂತೆಗಳಿರುತ್ತವೆ. ಆದರೆ ಚಿಂತನೆ ನಡೆಸಿದಾಗ ಚಿಂತೆಯಿಂದ ದೂರ ಆಗುವುದಕ್ಕೆ ಖಂಡಿತ ಸಾಧ್ಯವಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಬೆಳೆಸಿದಾಗ ಜೀವನ ಸಾರ್ಥಕವೆನಿಸುತ್ತದೆ ಮತ್ತು ಆತ್ಮತೃಪ್ತಿ ಸಿಗುತ್ತದೆ. ವಿದ್ಯಾರ್ಥಿ ಸಂಘ ನಾಯಕತ್ವಕ್ಕೆ ಪೂರಕವೆನಿಸಿ ಸ್ವಂತಿಕೆಯಲ್ಲಿ ಬದುಕುವ ಪಾಠವನ್ನು ತಿಳಿಸಿಕೊಡುತ್ತದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ವಿದ್ಯಾರ್ಥಿ ಜೀವನದ ಚಟುವಟಿಕೆಗಳು ಮುಂದಿನ ಜೀವನಕ್ಕೆ ಬುತ್ತಿ. ವಿದ್ಯಾರ್ಥಿ ಜೀವನದಲ್ಲಿ ನಮ್ಮನ್ನು ನಾವು ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಮುಂದಿನ ಜೀವನ ಸುಗಮವೆನಿಸುತ್ತದೆ. ದೇಶದಲ್ಲಿ ಒಗ್ಗಟ್ಟನ್ನು ಸ್ಥಾಪಿಸಲು ನಮ್ಮಲ್ಲಿ ಸರಿಯಾದ ನಾಯಕತ್ವ ಗುಣ ಇರಲೇಬೇಕು ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ವಿದ್ಯಾರ್ಥಿ ನಾಯಕ ಸಂಜಯ್ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸಭೆಯಲ್ಲಿ ಹಾಜರಿದ್ದರು.
ವಿದ್ಯಾರ್ಥಿನಿ ಆತ್ಮಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪವನ್ ಭಾರಧ್ವಾಜ್ ವಂದಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಅಕ್ಷತಾ ಎಂ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕರಾದ ನಯನ್ ಕುಮಾರ್ ಹಾಗೂ ಮುರಳಿ ಮೋಹನ ಸಹಕರಿಸಿದರು.