ಪುತ್ತೂರು : ಬಂಪರಿನೊಳಗೆ ಸಿಲುಕಿಕೊಂಡಿದ್ದ ಈ ನಾಯಿ ಸುಮಾರು 7೦ ಕಿಲೋಮೀಟರ್ ಸಾಗಿ ಯಾವುದೇ ಗಾಯಗಳಾಗದೆ ಆರಾಮವಾಗಿ ಬಂಪರ್ ಒಳಗಿನಿಂದ ಇಳಿದು ಹೋದ ಘಟನೆ ನಡೆದಿದೆ.
ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ನಾಯಿ ಅಲ್ಲಿಂದ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲೂ ಸುಬ್ರಹ್ಮಣ್ಯ ಅವರಿಗೆ ಕಷ್ಟವಾಗಿತ್ತು.
ಅಲ್ಲಿಂದ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರನ್ನು ಪರಿಶೀಲಿಸಿದಾಗ ಬಂಪರ್‌ನ ಗ್ರಿಲ್ ತುಂಡಾಗುರುವುದು ಗಮನಕ್ಕೆ ಬಂದಿತ್ತು. ತುಂಡಾದ ಗ್ರಿಲ್ ಮಧ್ಯೆ 7೦ ಕಿಲೋಮೀಟರ್ ಹಿಂದೆ ತನಗೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಗಿದೆ. ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್ ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ವಿನಂತಿಸಿದ್ದಾರೆ. ಗ್ಯಾರೇಜ್‌ನಲ್ಲಿ ಕಾರಿನ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಸುಮಾರು 7೦ ಕಿಲೊಮೀಟರ್ ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದರೂ ಕೊಂಚ ಗಲಿಬಿಲಿಗೊಂಡಿದೆ.