ಸೌದಿ ಅರೇಬಿಯಾ: ತೀವ್ರವಾದ ತಾಪಮಾನದ ಕಾರಣ 1,300 ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ಅಧಿಕೃತ ಪರವಾನಗಿಗಳನ್ನು ಹೊಂದಿರಲಿಲ್ಲ ಎಂದು ಸೌದಿ ಅರೇಬಿಯಾ ಭಾನುವಾರ ಹೇಳಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಅಮೆರಿಕ, ಇಂಡೋನೇಷ್ಯಾ, ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಹಜ್ ಯಾತ್ರೆಗೈದಿದ್ದರು. ಮಿತಿಮೀರಿದ ತಾಪಮಾನ ಏರಿಕೆಯಿಂದ 1,301 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಸುಮಾರು 3000 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರ ಪೈಕಿ ಶೇ.83 ಮಂದಿ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರಲಿಲ್ಲ. ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದವರಿಗಷ್ಟೇ ಕೊಠಡಿ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆ ಸಿಗುತ್ತದೆ. ಈಜಿಪ್ಟ್ ನಿಂದ ಬಂದವರಲ್ಲಿ ಕಳೆದ ವಾರ 658 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 630 ಮಂದಿ ನೋಂದಾಯಿಸದ ಯಾತ್ರಿಕರು ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ ಈ ವರ್ಷ ಮೆಕ್ಕಾದಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿತ್ತು. ಈ ವಿಪರೀತ ಸೆಖೆಯಿಂದಾಗಿ ಜನ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಹಜ್ ಯಾತ್ರೆ ಸಂದರ್ಭದಲ್ಲಿ ಯಾತ್ರಿಕರು ಈ ಪ್ರಮಾಣದಲ್ಲಿ ಸಾವಿಗೀಡಾಗಿರುವುದು ಇದೇ ಮೊದಲು ಎನ್ನಲಾಗಿದೆ.