ಇಂದಿನಿಂದ ಸಂಸತ್ತಿನ ಅಧಿವೇಶನ

ಹೊಸದಿಲ್ಲಿ : ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.  ಜುಲೈ 3ರವರೆಗೆ ನಡೆಯಲಿರುವ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನ ಲೋಕಸಭಾ ಸ್ಪೀಕರ್ ಆಯ್ಕೆ ಬುಧವಾರ ನಡೆಯಲಿದ್ದು, ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನೀಟ್-ಯುಜಿ ಪತ್ರಿಕೆ ಸೋರಿಕೆ, ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಮುಂದೂಡಿಕೆ ವಿಚಾರದಲ್ಲಿ ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದು, ಮೊದಲ ದಿನವೇ ಗದ್ದಲ ನಡೆಯುವ ಸಾಧ್ಯತೆ ಇದೆ.

ಅಧಿವೇಶನದ ಮೊದಲ ದಿನ ಏಳು ಬಾರಿ ಸಂಸದರಾಗಿದ್ದ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ದಾಖಲಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ. ಹಿರಿತನದ ಆಧಾರದಲ್ಲಿ ಸಂಸದ ಕೆ.ಸುರೇಶ್ ಈ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದು ಕಾಂಗ್ರೆಸ್ ಹೇಳುತ್ತಿದೆ.



































 
 

ಪ್ರಸಕ್ತ ಲೋಕಸಭೆಯಲ್ಲಿ ಸತತವಾಗಿ ಸೋಲನು ಅಭವಿಸದೆ ಸಂಸದರಾಗಿ ಸೇವೆ ಸಲ್ಲಿಸಿದ ವಿಚಾರದಲ್ಲಿ ಮಹತಾಬ್ ಹಿರಿಯರು ಎಂಬುದು ಸರ್ಕಾರದ ನಿಲುವು. ಸೋಮವಾರ ಸದನದ ಕಲಾಪ ಪ್ರಾರಂಭವಾಗುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಮುರ್ಮು ಅವರು ಮಹತಾಬ್ ಅವರಿಗೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಹೊಸದಾಗಿ ಆಯ್ಕೆಯಾದ ಸಂಸದರ ಪಟ್ಟಿಯನ್ನು ಮೊದಲು ಮಂಡಿಸಲಿದ್ದಾರೆ. ಏಪ್ರಿಲ್ ನಿಂದ ಜೂನ್ ವರೆಗೆ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಲೋಕಸಭೆ ಅಧಿವೇಶನ ಇದಾಗಿದೆ.

18ನೇ ಲೋಕಸಭೆಯಲ್ಲಿ ಎನ್.ಡಿ.ಎ 293 ಸ್ಥಾನಗಳೊಂದಿಗೆ ಬಹುಮತ ಹೊಂದಿದೆ, ಆದರೆ ಬಿಜೆಪಿ 240 ಸ್ಥಾನಗಳನ್ನು ಹೊಂದಿದೆ. ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ 99 ಸ್ಥಾನಗಳನ್ನು ಹೊಂದಿದೆ. ಸೋಮವಾರದ ಮೊದಲ ದಿನದ ಅಧಿವೇಶನದಲ್ಲಿ ಮೋದಿ ಮತ್ತವರ ಸಂಪುಟ ಸದಸ್ಯರು ಸೇರಿದಂತೆ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಂಗಳವಾರ 264 ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top