ಡಿಕೆಶಿಗೆ ವಿರುದ್ಧ ಸಿದ್ದರಾಮಯ್ಯ ಹೈಕಮಾಂಡ್ಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗಿದ್ದು, ಇದು ಕಾಂಗ್ರೆಸಿನ ಒಳ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಪತ್ರಕ್ಕೆ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ, ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಬಿರುಕು ಮೂಡಿಸಲು ನಕಲಿ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಿದ್ದಾರೆ.
ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡ ನಕಲಿ ಪತ್ರವೊಂದು ಹರಿದಾಡುತ್ತಿದೆ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷರ ಸಂಬಂಧವನ್ನು ಕೆಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಈ ಪತ್ರಕ್ಕೂ ನನಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆಂದು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಗೆಲುವಿನ ಹಾದಿಯಲ್ಲಿರುವ ನಮ್ಮ ಪಕ್ಷದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ಈ ಖೊಟ್ಟಿ ಪತ್ರವನ್ನು ಹರಿಯಬಿಡಲಾಗಿದೆ. ಈ ಬಗ್ಗೆ ನಾನು ಪೋಲಿಸರಿಗೆ ದೂರು ನೀಡಲಿದ್ದು, ಈ ದುಷ್ಕೃತ್ಯದ ಹಿಂದಿನ ದುರುಳರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುತ್ತಾರೆಂದು ನಂಬಿದ್ದೇನೆಂದು ತಿಳಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದು, ನಕಲಿ ಪತ್ರಗಳು ಅಥವಾ ತಿರುಚಿದ ಚಿತ್ರಗಳು ಅವರ ಒಗ್ಗಟ್ಟನ್ನು ಮುರಿಯುವುದಿಲ್ಲ. ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದಾರೆ. ವಿರೋಧದಿಂದ ಪ್ರಸಾರವಾಗುವ ಯಾವುದೇ ನಕಲಿ, ತಿರುಚಿದ ಚಿತ್ರಗಳು ನಮ್ಮ ಒಗ್ಗಟ್ಟು ಮತ್ತು ನಮ್ಮ ಜನರ ಬದ್ಧತೆಯನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪತ್ರದಲ್ಲಿ ಭಾರತ್ ಜೋಡೊ ಯಾತ್ರೆಯ ಸಮಾರೋಪದಲ್ಲಿ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ ಹಾಗೂ ಟಿಕೆಟ್ ಹಂಚಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಡುವೆ ಗುಂಪುಗಾರಿಕೆ ಇದೆ. ಇದು ಬಂಡಾಯಕ್ಕೆ ಕಾರಣವಾಗುತ್ತದೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎನ್ನಲಾಗಿದೆ.