ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಆರ್ಮಿ ಮತ್ತು ನೇವಿ ಘಟಕಗಳು, ಎನ್‌ಎಸ್‌ಎಸ್ ಘಟಕಗಳು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್ ಸಿಸಿ ಘಟಕಗಳು ಮತ್ತು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್ ಸಿ ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ಆಶಯದೊಂದಿಗೆ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಸಂತ ಫಿಲೋಮಿನಾ ಪದವಿ ಕಾಲೇಜಿನ ಎನ್‌ಸಿಸಿ ಆರ್ಮಿ ವಿಂಗ್ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾರವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್‌ನ ಅಧಿಕಾರಿ ತೇಜಸ್ವಿ ಭಟ್, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್‌ಸಿಸಿ ಆರ್ಮಿ ವಿಂಗ್ ಅಧಿಕಾರಿ ಪೀಟರ್ ನರೇಶ್ ಲೋಬೋ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪುಷ್ಪಾ ಎನ್ ಸಹಕಾರ ನೀಡಿದರು.
ಸಂತ ಫಿಲೋಮಿನಾ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಎನ್ ಸಿ ಸಿ ಆರ್ಮಿ ಮತ್ತು ನೇವಿ ಕೆಡೆಟ್‌ಗಳು, ಸಂತ ಫಿಲೋಮಿನಾ ಪ್ರೌಢಶಾಲೆಯ ಆರ್ಮಿ ನೇವಿ ಮತ್ತು ಏರ್‌ಫೋರ್ಸ್ ಎನ್‌ಸಿಸಿ ಕೆಡೆಟ್‌ಗಳು ಮತ್ತು ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕರು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಆದರೆ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ಸಾಧಿಸುವ ಸಮಗ್ರ ವಿಧಾನವಾಗಿದೆ. ಅದು ನಮಗೆ ಶಿಸ್ತನ್ನು ಕಲಿಸುತ್ತದೆ, ಆಂತರಿಕ ಶಾಂತಿಯನ್ನು ಬೆಳೆಸುತ್ತದೆ. ಇಂದಿನ ವೇಗದ ಜಗತ್ತಿನಲ್ಲಿ, ಒತ್ತಡ ಆತಂಕವು ಮುಂತಾದ ಋಣಾತ್ಮಕ ಭಾವನೆಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಯೋಗವು ನಮ್ಮ ಸ್ವಾಸ್ಥ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಶುಭ ಹಾರೈಸಿದರು. ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಂ. ಮಾಕ್ಸಿಂ ಡಿಸೋಜಾರವರು ಉಪಸ್ಥಿತರಿದ್ದರು.
ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಎನ್‌ಸಿಸಿ ನೇವಲ್ ವಿಂಗ್ ಅಧಿಕಾರಿ ಕ್ಲೆಮೆಂಟ್ ಪಿಂಟೋ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ವಾಸುದೇವ ಎನ್ ವಂದಿಸಿದರು. ಎನ್‌ಸಿಸಿ ಏರ್ ವಿಂಗ್ ಅಧಿಕಾರಿರೋಷನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.