ಕಣ್ಣುಕುಕ್ಕುವ ಹೆಡ್ ಲೈಟ್ ನಿಂದ ಹೈರಾಣಾದ ವಾಹನಸವಾರರು

ಬೆಂಗಳೂರು : ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ ಗಳನ್ನು ಅಳವಡಿಸುವುದರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ರೀತಿಯ ಲೈಟ್ ಗಳನ್ನು ಅಳವಡಿಸುವುದರಿಂದ ಎದುರಿನಿಂದ ಬರುವ ವಾಹನಗಳ ಚಾಲಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಇಂಥ ಲೈಟ್ ಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಉಲ್ಲಂಘಿಸಿದವರು ದಂಡ ಸೇರಿದಂತೆ ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗಲಿದೆ. ಈ ಕುರಿತು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್ ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಲೋಕ್ ಕುಮಾರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಾಹನಗಳಲ್ಲಿ ಎಲ್ಇಡಿ ಲೈಟ್ ಗಳನ್ನು ನಿಷೇಧಿಸುವ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ವಾಹನಗಳಲ್ಲಿ ಕಣ್ಣುಕುಕ್ಕುವಂಥ ಲೈಟ್ ಗಳನ್ನು ಬಳಸುತ್ತಿದ್ದರೆ ಮತ್ತು ವಾಹನಗಳಲ್ಲಿ ಅಳವಡಿಸಿರುವ ಲೈಟ್ ಗಳು ಇತರ ಚಾಲಕರಿಗೆ ತೊಂದರೆಯನ್ನು ಉಂಟು ಮಾಡುವಂತೆ ಇದ್ದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲು ನಾವು ಸೂಚಿಸುತ್ತಿದ್ದೇವೆ. ಎಲ್ಇಡಿ ಲೈಟ್ ಗಳು ಇತರ ಚಾಲಕರಿಗೆ ಸಮಸ್ಯೆ ಉಂಟುಮಾಡುತ್ತವೆ. ಹೀಗಾಗಿ ನಿಯಮ ಉಲ್ಲಂಘಿಸುವವರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.







































 
 

ವಾಹನಗಳಲ್ಲಿ ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ನಮೂದಿಸಿರುವ ಮಾನದಂಡದಂತೆ ಲೈಟ್ ಗಳನ್ನು ಅಳವಡಿಸುವ ಕುರಿತು ಸಂಚಾರಿ ಪೊಲೀಸರಿಗೆ ಆದೇಶ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್ಇಡಿ ದೀಪಗಳನ್ನು ಅಳವಡಿಸುತ್ತಿದ್ದು ಇದರಿಂದ ಎದುರು ಬದಿಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀರ ತೊಂದರೆಯುಂಟಾಗುತ್ತಿದೆ. ಇದರಿಂದ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಪೈಕಿ ಪ್ರಮುಖವಾಗಿ ಭಾರಿ ಗಾತ್ರ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್ಇಡಿ ದೀಪಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿರುವುದರಿಂದ ಇತರೆ ವಾಹನ ಚಾಲಕರುಗಳಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತದೆ. ಎಲ್ಲಾ ವಾಹನ ಸವಾರರು ತಮ್ಮ ತಮ್ಮ ವಾಹನಗಳಿಗೆ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ನಮೂದಿಸಿರುವ ಮಾನದಂಡಂದಂತೆ ಹೆಡ್ ಲೈಟ್ ಗಳನ್ನೇ ಅಳವಡಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಒಂದು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177 ರಡಿ ಪ್ರಕರಣಗಳನ್ನು ದಾಖಲಿಸಬಹುದಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಘಟಕಾಧಿಕಾರಿಗಳು ತಮ್ಮ ತಮ್ಮ ಘಟಕಗಳಲ್ಲಿ ಸಂಚರಿಸುವ ವಾಹನಗಳಲ್ಲಿ ಈ ರೀತಿಯ ಹೆಚ್ಚು ಪ್ರಖರದ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್ಇಡಿ ಲೈಟ್ ಗಳನ್ನು ಅಳವಡಿಸಿರುವುದು ಕಂಡು ಬಂದಲ್ಲಿ ಅಂತಹ ವಾಹನ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177 ಅಡಿ ಪ್ರಕರಣಗಳನ್ನು ದಾಖಲು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಾಹನಗಳಲ್ಲಿ ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್ಇಡಿ ದೀಪಗಳನ್ನು ಅಳವಡಿಸಿರುವ ವಾಹನ ಚಾಲಕರ ವಿರುದ್ಧ ಜುಲೈ ತಿಂಗಳಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣಗಳನ್ನು ದಾಖಲಿಸಿ, ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top