ಪುತ್ತೂರು: ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸಹಿತ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಪುತ್ತೂರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಗರದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆ ಸಮೀಪ ನಡೆಯಿತು.
ಮೊದಲಿಗೆ ಖಾಸಗಿ ಬಸ್ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಜಾಥಾ ಮೂಲಕ ಬಂದು ಗಾಂಧಿಕಟ್ಟೆ ಸಮೀಪ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಯಿತು. ಬಳಿಕ ಅಲ್ಲಿಂದ ಮುಖ್ಯರಸ್ತೆಯಾಗಿ ಶ್ರೀಧರ ಭಟ್ ಬಳಿಯಿಂದ ತೆರಳಿ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಒಂದೆಡೆ ಜನರ ಬದುಕು ಬರ್ಬರವಾಗಿದ್ದು, ಇನ್ನೊಂಡೆದೆ ರೈತ ಆತ್ಮಹತ್ಯೆಗೆ ತೊಡಗಿದ್ದಾನೆ. ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನರನ್ನು ಲೂಟಿ ಮಾಡಲು ಹೊರಟಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸದೆ ಬೆಲೆ ಏರಿಕೆ ಮಾಡುವ ಮೂಲಕ ಜನರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅಲ್ಪಸಂಖ್ಯಾತರ ತುಷ್ಠೀಕರಣದಲ್ಲಿ ಮುಳುಗಿದೆ. ಈ ದುರ್ಬಲ ಸರಕಾರ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪುತ್ತೂರು ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಮನವಿ ಪತ್ರ ಓದಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಆರ್.ಸಿ.ನಾರಾಯಣ, ಅರುಣ್ ಕುಮಾರ್ ಪುತ್ತಿಲ, ನಿತಿಶ್ ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ, ಸಹಜ್ ರೈ, ರಾಜೇಶ್ ಪರ್ಪುಂಜ, ವಿದ್ಯಾ ಗೌರಿ, ಗೌರಿ ಬನ್ನೂರು, ಜಯಶ್ರೀ ಶೆಟ್ಟಿ, ಮೀನಾಕ್ಷಿ ಮಂಜುನಾಥ ಮತ್ತಿತರ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ನಗರ ಮಂಡಲ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ ವಂದಿಸಿದರು.