ವಿಟ್ಲ: ಸೈಟ್ ಇಲ್ಲದವರಿಗೆ ಸೈಟ್ ಕೊಡಿ ಗ್ರಾಮ ನೋಡಬೇಡಿ, ಮನೆ ಇಲ್ಲದವರು ಮಾತ್ರ ಸೈಟ್ ಗೆ ಅರ್ಜಿ ಹಾಕ್ತಾರೆ. ಅವರಿಗೆ ನಿರ್ದಿಷ್ಟ ಗ್ರಾಮವೇ ಇಲ್ಲದ ಕಾರಣ ಯಾವ ಗ್ರಾಮವಾದರೂ ನಡೆಯುತ್ತದೆ. ಗ್ರಾಮದಲ್ಲಿ ಸೈಟ್ ಇದೆ ಅರ್ಜಿ ಇಲ್ಲಾಂದ್ರೆ ಬೇರೆ ಗ್ರಾಮದವರಿಗೆ ಆ ಸೈಟನ್ನು ಕೊಡಿ ಎಲ್ಲರೂ ನಮ್ಮವರೇ ಆಗಿದ್ದಾರೆ ಎಂದು ಶಾಸಕರು ಸೂಚಿಸಿದರು.
ಮನೆ ಇಲ್ಲದವರಿದ್ದಾರೆ, ಮೂರು ಹೊತ್ತಿನ ಊಟಕ್ಕೆ ತೊಂದರೆ ಇದ್ದವರಿದ್ದಾರೆ, ಅನಾರೋಗ್ಯದಿಂದ ಇದ್ದವರು ಇದ್ದಾರೆ. ಅವರು ಏನು ಮಾಡಬೇಕು. ಅವರಿಗೆ ಅನ್ಯಾಯವಾಗಬಾರದು. ಅವರಿಗೆ ಸ್ವಂತ ಮನೆಯಾಗಬೇಕೆಂಬ ಆಸೆಯಿಲ್ಲವೇ ಮಾಡಿಕೊಳ್ಳಲಿ ಸೈಟ್ ಕೊಡಿ ಅದು ಇದೂ ಹೇಳಿ ಯಾವುದೇ ಕಾರಣಕ್ಕೂ ಸತಾಯಿಸಬೇಡಿ ಎಂದು ಶಾಸಕರು ಸೂಚನೆ ನೀಡಿದರು.
ಕೆದಿಲ ಗ್ರಾಮದಲ್ಲಿ 20 ಎಕ್ರೆ ಗೋಮಾಳ ಜಾಗ ಇತ್ತಲ್ವ ಅದು ಈಗ ಇದೆಯಾ? ಯಾರ ವಶದಲ್ಲಿದೆ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಶಾಸಕರು ಸೂಚನೆ ನೀಡಿದರು.
ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ 94 ಸಿ. ಫೈಲ್ ಎಷ್ಟು ಪೆಂಡಿಂಗ್ ಇದೆ. ಎಷ್ಟು ವಿಲೇವಾರಿಯಾಗಿದೆ. 42 ಕಡತ ಬಾಕಿ ಇದೆ ಎಂದು ಕಂದಾಯ ನಿರೀಕ್ಷಕರು ಮಾಹಿತಿ ನೀಡಿದರು.
ಅಕ್ರಮ ಸಕ್ರಮ ಫೈಲುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪುತ್ತೂರು ನಗರಸಭಾ ವ್ಯಾಪ್ತಿಯಿಂದ 5 ಕಿ ಮೀ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮಾಡುವಂತಿಲ್ಲ ಎಂಬ ಸರ್ಕ್ಯುಲರ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. 5 ಕಿ ಮಿ ಏರ್ ವೇ ಯ ಪ್ರಕಾರ ನಾವು ಹೋದರೆ ಎಲ್ಲಿಯೂ ಅಕ್ರಮ ಸಕ್ರಮ ಮಾಡುವಂತಿಲ್ಲ. ಕೆದಿಲ ಗ್ರಾಮ ಈ ಏರ್ ವೇಸ್ ಅಳತೆಯಿಂದ ಹೊರಗಿದೆ. ಆರ್ಯಾಪು, ಬಲ್ನಾಡು, ಕೆಮ್ಮಿಂಜೆ, ಚಿಕ್ಕಮುಡ್ನೂರು, ಬನ್ನೂರು ಗ್ರಾಮಗಳನ್ನು ಬಾಗಶ ಎಂದು ಗುರುತಿಸಲಾಗಿದೆ. ರೂಟ್ ವೇ ಪ್ರಕಾರ 5 ಕಿಮೀ ವ್ಯಾಪ್ತಿ ಮಾನ್ಯ ಮಾಡಬೇಕಿದೆ. ಅದು ಏನೇ ಇರಲಿ ನೀವು ಅಕ್ರಮ ಸಕ್ರಮ ಫೈಲನ್ನು ಪುಟಪ್ ಮಾಡಿ. ಪೆಂಡಿಂಗ್ ಮಾಡಬೇಡಿ ಎಂದು ಶಾಸಕರು ಸೂಚಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನಕ್ಕೆ 1000 ಅರ್ಜಿಗಳು ಬಂದಿದೆ. ನೆಲ್ಲಿಗುಡ್ಡೆಯಲ್ಲಿ 7 ಎಕ್ರೆ ಜಾಗ ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಜಾಗ ಹುಡುಕಿಡಿ. ಒಂದು ಸಾವಿರ ಅರ್ಜಿದಾರರಿಗೂ ಮನೆ ನಿವೇಶನ ಕೊಡಲೇಬೇಕು ಎಂದು ಶಾಸಕರು ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಕಾಮಗಾರಿ ಶೀಘ್ರ ಮುಗಿಸಬೇಕು ಎಂದು ಸೂಚಿಸಿದರು.
ವಿಟ್ಲದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕರೆಗಳು ಬರುತ್ತಿದೆ ಇದಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿಸಿದ್ದೇನೆ. ಪಟ್ಟಣ ಪಂಚಾಯತ್ ಆಡಳಿತ ಭಾರೀ ಸ್ಲೋ ಇದೆ. ಬೇಸಿಗೆಯ ವಾರದಲ್ಲಿ ನಾಲ್ಕುದಿನಗಳು ನೀರು ಇಲ್ಲದೇ ಇದ್ದ ಘಟನೆಯೂ ನಡೆದಿದೆ. ಪಟ್ಟಣ ಪಂಚಾಯತ್ ವತಿಯಿಂದ ಎಲ್ಲೆಲ್ಲಿ ನೀರಿನ ಟ್ಯಾಂಕ್ ಬೇಕೋ ಅಲ್ಲೆಲ್ಲಾ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು ಶಾಸಕರು ತಿಳಿಸಿದರು. ಕಚೇರಿಯಲ್ಲೇ ಕುಳಿತುಕೊಳ್ಳುವುದರಿಂದ ಜನರ ಸಮಸ್ಯೆ ಗೊತ್ತಾಗುವುದಿಲ್ಲ ಎಂದು ಹೇಳಿದರು.
ಅಧಿಕಾರಿಗಳ ಸಭೆಗೆ ಅಧಿಕಾರಿಗಳೇ ಗೈರಾದರೆ ನಾವು ಸಭೆ ನಡೆಸುವುದು ಹೇಗೆ. ಜನರ ಸಮಸ್ಯೆ ಪರಿಹರಿಸುವುದು ಹೇಗೆ. ಮುಂದೆ ಇದು ಮರುಕಳಿಸಬಾರದು ಎಲ್ಲಾ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಜನರ ಸಮಸ್ಯೆ ಪರಿಹಾರಕ್ಕಾಗಿ ನಾವಿಲ್ಲಿ ಕುಳಿತಿರುವುದು. ಅಧಿಕಾರಿಗಳು ಯಾರದ್ದೋ ಮುಖಸ್ತುತಿ ಮಾಡದೆ ಸಭೆಯಲ್ಲಿ ನನಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಅಶೋಕ್ ಕುಮಾರ್ ರೈ ರವರು ಹೇಳಿದರು.