ಅದಾನಿ ಸಮೂಹಕ್ಕೆ ಹೆಚ್ಚಿದ ಸಂಕಷ್ಟ
ಮುಂಬೈ: ಷೇರುಮೌಲ್ಯ ಕುಸಿತದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಅದಾನಿ ಕಂಪನಿಯಿಂದ ಈಗ ಆರ್‌ಬಿಐ ಸಾಲದ ವಿವರಗಳನ್ನು ಕೇಳಿದೆ. ಷೇರುಗಳ ಮೌಲ್ಯದಲ್ಲಿ ತೀವ್ರ ಕುಸಿತದ ನಡುವೆ ಅದಾನಿ ಸಮೂಹ ರೂ.20,000 ಕೋಟಿ ರೂ.ಗಳ ಫಾಲೋ ಆನ್ ಷೇರುಗಳ ಮಾರಾಟವನ್ನು ಹಿಂಪಡೆಯುವುದಾಗಿ ಫೆ.1 ರಂದು ಘೋಷಿಸಿದ 24 ಗಂಟೆಗಳಲ್ಲಿ ಆರ್‌ಬಿಐ ಬ್ಯಾಂಕ್‌ಗಳಿಂದ ಸಾಲದ ಮಾಹಿತಿ ಕೇಳಿದೆ.
ಇನ್ನು ಎಫ್‌ಪಿಒಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಸ್ವಿಸ್ ಬ್ಯಾಂಕ್ ಕ್ರೆಡಿಟ್ ಅದಾನಿ ಸಂಸ್ಥೆಯ ಬಾಂಡ್‌ಗಳನ್ನು ಸಾಲ ನೀಡುವ ಪ್ರಕ್ರಿಯೆಯಲ್ಲಿ ಆಧಾರವಾಗಿ ಪರಿಗಣಿಸುವುದನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ.ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ ಸಂಶೋಧನಾ ವರದಿ ಅದಾನಿ ಸಮೂಹ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಅಕ್ರಮವೆಸಗಿದೆ ಎಂದು ಆರೋಪಿಸಿದಾಗಿನಿಂದ ಅದಾನಿ ಷೇರುಗಳ ಮೌಲ್ಯ ಕುಸಿಯುತ್ತಿದೆ.
ಬ್ಯಾಂಕ್ ಗಳು ಹಲವು ಬಾರಿ ಹೊಣೆಗಾರಿಗೆ ಭದ್ರತೆಗಳನ್ನಿಟ್ಟುಕೊಂಡು ಸಾಲ ನೀಡುತ್ತವೆ ಹಾಗೂ ಅದಾನಿ ಸಮೂಹದ 10 ಲಿಸ್ಟೆಡ್ ಸಂಸ್ಥೆಗಳ ಈಕ್ವಿಟಿ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡಿರುವುದರಿಂದ ಈ ಹೊಣೆಗಾರಿಕೆ ಭದ್ರತೆ ಮೌಲ್ಯವೂ ಕುಸಿತ ಕಂಡಿದೆ.
ಹಿಂಡನ್‌ಬರ್ಗ್ ಸಂಶೋಧನಾ ವರದಿ ಪ್ರಕಟವಾದ ಬೆನ್ನಲ್ಲೆ ಹೂಡಿಕೆದಾರರಲ್ಲಿ ಆತಂಕ ಮೂಡಿದ್ದು, ಬ್ಯಾಂಕ್‌ಗಳು ಷೇರುಗಳ ಮಾರಾಟಕ್ಕೆ ಒತ್ತಡ ಹಾಕುತ್ತಿವೆ. ಹೂಡಿಕೆದಾರರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್‌ಬಿಐ ಅದಾನಿ ಸಮೂಹಕ್ಕೆ ನೀಡಿರುವ ಸಾಲ ನಗದು ಉತ್ಪಾದಿಸುವ ಆಸ್ತಿಗಳ ಮೂಲಕ ಸುರಕ್ಷಿತವಾಗಿದೆ ಎಂದು ಹೇಳಿತ್ತು.