ಪುತ್ತೂರು: ಜನರು ನೊಂದು ನೋವಿನಲ್ಲಿ ಬರುವ ಜಾಗ ಇದ್ರೆ ಅದು ಆಸ್ಪತ್ರೆ ಮತ್ತು ಪೊಲೀಸ್ ಸ್ಟೇಷನ್. ಆದರೆ ಪೊಲೀಸ್ ಠಾಣೆಗೆ ಹೆದರಿ ಹೋಗುವವರಿದ್ದಾರೆ. ಆಸ್ಪತ್ರೆಗೆ ನೋವು ತೆಗೆದು ಕೊಂಡು ಬರುವವರು ಇದ್ದಾರೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಸ್ಪಂದನೆ ಸಿಗಬೇಕು. ನೊಂದು ಬಂದವರಿಗೆ ಮೊದಲ ಸ್ಪಂದನೆ ನೀಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಆಸ್ಪತ್ರೆಯ ವೈದ್ಯರುಗಳಿಗೆ ಸೂಚನೆ ನೀಡಿದರು.
ಸರಕಾರಿ ಆಸ್ಪತ್ರೆಯಲ್ಲಿ ನಡೆದ ನೂತನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುತ್ತೂರು ಆಸ್ಪತ್ರೆಯಲ್ಲಿ ನಾಲ್ಕು ಜನ ವೈದ್ಯರ ಕೊರತೆ ಇದ್ದರೂ ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೂ ಕೆಲವೊಂದು ಪರಿಸ್ಥಿಯಲ್ಲಿ ಜನರಿಗೆ ಅರ್ಥ ಆಗದೆ ನಿಮ್ಮ ಮೇಲೆಯೇ ಕೋಪಗೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಅವರೊಂದಿಗೆ ಉತ್ತಮ ಸ್ಪಂದನೆ ಕೊಡಿ. ಸಮಾಜದಲ್ಲಿ ಅರ್ಧ ವೈದ್ಯರ ಸಮಾಧಾನ ಮತ್ತು ಅರ್ಧ ವೈದ್ಯರು ನೀಡುವ ಔಷಧಿಯಿಂದ ರೋಗಿಯ ಖಾಯಿಲೆ ಗುಣಮುಖವಾಗುತ್ತದೆ. ಇದನ್ನು ಅರಿತು ನೀವು ಕೆಲಸ ಮಾಡಿ ಎಂದ ಅವರು ಪುತ್ತೂರು ಸರಕಾರಿ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿರುವುದು ಉತ್ತಮ ವಿಚಾರ ಎಂದರು.
ಪುತ್ತೂರು ಸರಕಾರಿ ಆಸ್ಪತ್ರೆಗೆ ಒಟ್ಟು 2 ಕೋಟಿ ರೂ. ಅನುದಾನ ಬಂದಿದೆ. ಈಗಾಗಲೇ 1.40 ಕೋಟಿ ಆಸ್ಪತ್ರೆಯ ಕಾಮಗಾರಿಗಳಿಗೆ ಬಂದಿದೆ. ಅದರಲ್ಲಿ ಆಸ್ಪತ್ರೆಯ ಎಲ್ಲಾ ದುರಸ್ಥಿ ಕಾರ್ಯಗಳು ನಡೆಯಬೇಕಾಗಿದೆ. 50 ಲಕ್ಷ ಲ್ಯಾಬ್ ಗೆ ಬಂದಿದೆ. ಇದರಲ್ಲಿ ಲ್ಯಾಬ್ ಪರಿಪೂರ್ಣ ಆಗಬೇಕು. ಸ್ಕ್ಯಾನಿಂಗ್ ಮೆಷಿನ್ ಖರೀದಿಸಲು 27 ಲಕ್ಷ ಇದೆ. ರೆಡಿಯೋಲಿಜಿಸ್ಟ್ ರಾಧಿಕಾ ಅವರು ಕಂಪೆನಿಯಿಂದ ಈ ಕುರಿತು ಮಾಹಿತಿ ಪಡೆದುಕೊಳ್ಳಿ ಎಂದು ಶಾಸಕರು ಹೇಳಿದ ಅವರು, ಆಸ್ಪತ್ರೆಯ ಬೇಡಿಕೆಯಂತೆ ತುರ್ತು 50 ಬೆಡ್ ಹೆಚ್ಚುವರಿ ಮಾಡಲು ಪ್ರಸ್ತಾವನೆ ಕಳುಹಿಸಲು ತಿಳಿಸಿದರು.
ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಗಾಗಿ ಈಗಾಗಲೇ ಎರಡು ಕಡೆ ಜಾಗ ನೋಡಿ ಅಗಿದೆ. ನಾಳೆಯೇ ಅದರ ಮುಖ್ಯ ಅಧಿಕಾರಿ ಬರುತ್ತಾರೆ. ಅದಕ್ಕೆ ಪ್ರಸ್ತಾವನೆ ತಕ್ಷಣ ಸಲ್ಲಿಸುವ ಕೆಲಸ ಆಗಬೇಕು. 15 ಕೋಟಿ ಅದಕ್ಕೆ ಮಂಜೂರು ಆಗುತ್ತದೆ. ಇದರಲ್ಲಿ 50 ಬೆಡ್ ನ ಆಸ್ಪತ್ರೆಯೂ ಬರುತ್ತದೆ. ಮ್ಯಾನ್ ಪವರ್ ಬರುತ್ತದೆ ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಮಾತನಾಡಿ, ಅಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆಯಲ್ಲಿ ತೊಂದರೆ ಆದಾಗ ಸಾರ್ವಜನಿಕರಿಗೆ ಸೌಮ್ಯದಿಂದ ಉತ್ತರ ಕೊಡಬೇಕಾಗುತ್ತದೆ. ಎನಾದರೂ ಸಮಸ್ಯೆ ಬಂದಾಗ ಗಮನಕ್ಕೆ ತನ್ನಿ. ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಶಾ ಜ್ಯೋತಿ, ಆಸ್ಪತ್ರೆಯ ಕುಂದುಕೊರತೆಯ ಕುರಿತು ಮಾಹಿತಿ ನೀಡಿದರು.
ಡಾ ಜಯದೀಪ್ ಆದಾಯ ವೆಚ್ಚವನ್ನು ಸಭೆಗೆ ಮಂಡಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮುಕೇಶ್ ಕೆಮ್ಮಿಂಜೆ, ಸುದೇಶ್ ಶೆಟ್ಟಿ, ಅಸ್ಕರ್ ಆನಂದ್, ಸಿದ್ಸಿಕ್ ಸುಲ್ತಾನ್, ವಿಕ್ಟರ್ ಪಾಯಸ್, ಅನ್ವರ್ ಕಬಕ ವಿವಿಧ ಸಲಹೆ ನೀಡಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೆಚ್ ಐವಿ ತಾರಾನಾಥ ಕಾರ್ಯಕ್ರಮ ನಿರೂಪಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಆರೋಗ್ಯ ರಕ್ಷಾ ಸಮಿತಿ ಜಿಲ್ಲಾ ಸಮಿತಿ ಸದಸ್ಯ ದಾಮೋದರ್ ಮುರ, ಸರಕಾರಿ ಆಸ್ಪತ್ರೆಯ ಜಿಲ್ಲಾ ಮಟ್ಟದ ಅಧಿಕಾರಿಗಳಾದ ರಾಜೇಶ್, ಗುರುಪ್ರಸಾದ್, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.