ಪುತ್ತೂರು: ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು.ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿನ ಪ್ರತಿಭೆಯನ್ನು ಗುರುತಿಸಿ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಾಗ ಪ್ರತಿಭೆ ವಿಕಸನಗೊಳ್ಳುತ್ತದೆ. ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು ಎಂದು ಮುಕ್ರಂಪಾಡಿಯಲ್ಲಿರುವ ಎಸ್. ಆರ್. ಕೆ. ಲ್ಯಾಡರ್ಸ್ ನ ಮಾಲಕರಾದ ಕೇಶವ ಅಮೈ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಪಿಯುಸಿ ಎನ್ನುವುದು ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು. ಎಂದು ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ತವ್ಯ ಪ್ರಜ್ಞೆಯೊಂದಿಗೆ ಛಲವನ್ನು ಹೊಂದಿ ಕನಸು ಈಡೇರಿಸುವ ಜವಾಬ್ದಾರಿ ಹೊಂದಬೇಕು.ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಯ ಜೊತೆಗೆ ಬದುಕಿಗೆ ಆಸರೆಯಾಗುವ ಉನ್ನತ ಶಿಕ್ಷಣವನ್ನು ಪಡೆದು ಸಮುದಾಯದ ಏಳಿಗೆಗಾಗಿ ಸಹಕಾರಿಯಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಮತ್ತು ತಾಲೂಕಿಗೆ ದ್ವಿತೀಯ ರ್ಯಾಂಕ್‍ಪಡೆದ ಭೂಮಿಕಾ ಜಿ. ಮತ್ತು ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕಗಳಿಸಿದ ಸಂಜನಾ ಸತೀಶ ಕಲ್ಲುರಾಯ ಅವರನ್ನು ಸನ್ಮಾನಿಸಲಾಯಿತು ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳ ವಿವರಗಳನ್ನು ಉಪನ್ಯಾಸಕರಾದ ಮಧುರಾ, ರುಚಿತಾ ಕೃಷ್ಣ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ, ಸಂಚಾಲಕ ಸಂತೋಷ ಬಿ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಉಪನ್ಯಾಸಕಿ ಸಾಯಿಗೀತ ವಂದಿಸಿದರು. ಮಧುರಾ ಕಾರ್ಯಕ್ರಮ ನಿರೂಪಿಸಿದರು.