ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಪರಿಸರ ಕ್ಲಬ್ ಗಳ ಸಹಯೋಗದೊಂದಿಗೆ ವಿಶ್ವ ಪರಿಸರ ಹಾಗೂ ಅಂತರಾಷ್ಟ್ರೀಯ ಜೀವವೈವಿಧ್ಯ ದಿನವನ್ನು ಆಚರಿಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಜಿ. ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ನಾವು ಸಂಪನ್ಮೂಲಗಳನ್ನು ಸಂರಕ್ಷಿಸುವ ಜತೆಗೆ ಹಲವಾರು ವಸ್ತುಗಳನ್ನು ಮರುಬಳಕೆ ಮಾಡಬೇಕು. ಹಸಿ ತ್ಯಾಜ್ಯವಸ್ತುಗಳನ್ನು ಕಾಂಪೋಸ್ಟ್ ಮಾಡಿ ಭೂಮಿಯ ಫಲವತ್ತತೆಯನ್ನು ಉಳಿಸುವಲ್ಲಿ ನೆರವಾಗಬೇಕು. ಭೂಮಿಯು ಮುಂದಿನ ಪೀಳಿಗೆಗೆ ಸೇರಿದೆ. ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಮುಖ್ಯ ಅತಿಥಿಯಾಗಿ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ ಬಿ.ಎಂ. ಮಾತನಾಡಿ, ಕ್ಷಿಣಿಸಿದ ಅಥವಾ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸಸ್ಥಾನಗಳನ್ನು ಮರುಸ್ಥಾಪಿಸುವುದು, ಈ ಮೂಲಕ ಮತ್ತಷ್ಟು ಹಾನಿಯನ್ನು ತಡೆಗಟ್ಟುವುದು, ಸಂಪನ್ಮೂಲಗಳ ಮಿತ ಹಾಗೂ ಮರುಬಳಕೆಯ ಬಗ್ಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಮಾನವರ ಅವೈಜ್ಞಾನಿಕ ಚಟುವಟಿಕೆಗಳ ಫಲವಾಗಿ ಇಂದು ಪರಿಸರ ಮಾಲಿನ್ಯ ಉಂಟಾಗುತ್ತದೆ. ಅರಣ್ಯ ನಾಶ, ಅವೈಜ್ಞಾನಿಕ ಕೃಷಿ ಚಟುವಟಿಕೆಗಳು ಇಂದು ಪ್ರಾಕೃತಿಕ ಸಂಪನ್ಮೂಲಗಳಿಗೆ ಹಾನಿಯುಂಟು ಮಾಡಿವೆ. ನಾವು ಭೂಮಿಯನ್ನು ಚೆನ್ನಾಗಿ ನೋಡಿಕೊಂಡಲ್ಲಿ ಅದು ನಮ್ಮನ್ನು ಚೆನ್ನಾಗಿಡಬಲ್ಲುದು ಎಂದು ಹೇಳಿದರು.
ಪ್ರತೀಕ್ಷಾ ಎ. ಮತ್ತು ತಂಡ ಪ್ರಾರ್ಥನೆ ಹಾಡಿದರು. ಪ್ರತೀಕ್ಷಾ ಜಿ ಸ್ವಾಗತಿಸಿದರು, ಟ್ರೀಸಾ ಸೆಲೆಸ್ಟಿಯಾ ಪಿ.ವಿ. ವಂದಿಸಿದರು. ಶ್ರಾವ್ಯ ಆರ್.ಎಸ್. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಶಶಿಪ್ರಭಾ ಬಿ. ಸ್ಮಿತಾ ಆಳ್ವ, ಶ್ರೀರಕ್ಷಾ ಬಿ.ವಿ. ಉಪಸ್ಥಿತರಿದ್ದರು.