ಪುತ್ತೂರು: ಪಾರಂಪರಿಕ ದಿನಾಚರಣೆ ಕೇವಲ ಒಂದು ದಿನದ ಪ್ರೇರಣೆಯಾಗದೆ, ನಿತ್ಯ ಜೀವನದಲ್ಲಿ ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವ ಆಚರಣೆ ಎನಿಸಬೇಕು. ನಮ್ಮ ಜೀವನಪದ್ಧತಿ, ಆಚಾರ ವಿಚಾರಗಳು ಸಂಸ್ಕಾರದ ನೆಲೆಯಲ್ಲಿ ಬೆಳೆದು ಬಂದಾಗ ನಮ್ಮ ವ್ಯಕ್ತಿತ್ವ ಬೆಳಗುವುದಕ್ಕೆ ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸರೇಶ ಶೆಟ್ಟಿ ಹೇಳಿದರು.
ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾರಂಪರಿಕ ದಿನವನ್ನು ಆಚರಿಸುವುದರ ಹಿಂದೆ ನಾವು ಹೇಗಿರಬೇಕೆಂಬ ಸಂದೇಶವನ್ನು ನೀಡುವ ಉದ್ದೇಶ ಅಡಗಿದೆ. ಎದೆಯೆತ್ತರಕ್ಕೆ ಬೆಳೆದು ನಿಂತ ಮಕ್ಕಳು ಸೀರೆಯಲ್ಲಿ, ಪಂಚೆಯಲ್ಲಿ ಹೊರಟು ನಿಂತಾದ ಹೆತ್ತವರಿಗಾಗಬಹುದಾದ ಸಂಭ್ರಮ ಅನೂಹ್ಯವಾದದ್ದು. ಭಾರತೀಯ ಉಡುಗೆ ತೊಡುಗೆಗಳು ನಮ್ಮ ಸೌಂದರ್ಯಕ್ಕೆ ಪೂರಕವಾದದ್ದೇ ಆಗಿವೆ ಎಂದರು.
ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಆನಂದೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಯೋಗ ಶಿಕ್ಷಕಿ ಶರಾವತಿ ರವಿನಾರಾಯಣ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಚೈತನ್ಯಾ ಸಿ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ಸ್ವಾಗತಿಸಿ, ಅಧ್ಯಕ್ಷ ನವನೀತ್ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.