ಪುತ್ತೂರು: ಯಶಸ್ಸನ್ನು ತಲುಪುವ ಛಲ ಇರುವವನು ಎಂದೂ ಅನುಕೂಲಗಳನ್ನು ಬಯಸುವುದಿಲ್ಲ, ಅನಾನುಕೂಲಗಳನ್ನು ಅವಕಾಶಗಳನ್ನಾಗಿ ಬದಲಿಸಿ ಮುನ್ನಡೆಯುವುದು ಯಶಸ್ವಿ ವ್ಯಕ್ತಿಗಳ ಲಕ್ಷಣ ಎಂದು ಉದ್ಯಮಿ, ಹುಬ್ಬಳ್ಳಿ ಅನನ್ಯ ಫೀಡ್ಸ್ ನ ಸ್ಥಾಪಕ ದಿವಾನ್ ಗೋವಿಂದ ಭಟ್ ಅಭಿಪ್ರಾಯಪಟ್ಟರು.
ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಸ್ನಾತಕೋತ್ತರ ವಾಣಿಜ್ಯ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ವಿವರ್ಥನ-2024 ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾಡುವ ಕೆಲಸದ ಬಗ್ಗೆ ಶ್ರದ್ಧೆ, ಛಲ ಮತ್ತು ವಿಧೇಯತೆ ಇದ್ದರೆ ಯಶಸ್ಸು ನಿಮ್ಮ ಸಮೀಪಕ್ಕೆ ಬರುವುದು, ಅನುಕೂಲಗಳು ನಿಮ್ಮನ್ನು ಬೆಳೆಯಲು ಸಹಕಾರಿಯಾಗಬಲ್ಲದು. ಹಾಗಾಗಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕಲಿಯಿರಿ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಇದ್ದರೆ ಹೊಸತನ್ನು ಏನಾದರೂ ಮಾಡಲು ಪ್ರಯತ್ನಿಸಿ. ಮನಸ್ಸಿನಲ್ಲಿರುವ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶಗಳನ್ನು ಬಳಸಿಕೊಳ್ಳಿ ಎಂದು ನುಡಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಶುಭ ಹಾರೈಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ, ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಹೆಚ್ ಜಿ, ಕಾಲೇಜಿನ ವಿಶೇಷಾಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ವಿದ್ಯಾರ್ಥಿ ಪ್ರತಿನಿಧಿ ನಿರಂಜನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಧನ್ಯಶ್ರೀ ಐ ಸ್ವಾಗತಿಸಿ, ರಾಹುಲ್ ಪಿ ಆರ್. ವಂದಿಸಿದರು. ಪುಣ್ಯಶ್ರೀ ನಿರೂಪಿಸಿದರು. ಉದ್ಯಮಿ, ಅನನ್ಯ ಫೀಡ್ಸ್ ಹುಬ್ಬಳ್ಳಿ ಇದರ ಸ್ಥಾಪಕ ದಿವಾನ್ ಗೋವಿಂದ ಭಟ್ ಅವರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ ಡಿ ಪಿ ರೆಮಿಡಿಸ್ ನ ಎಂ ಡಿ ಡಾ. ಹರಿಕೃಷ್ಣ ಪಾಣಾಜೆ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಗುರಿ ಬೇಕು. ಗುರಿ ಇಲ್ಲದೆ ಸಾಧನೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿಕೊಂಡಿದ್ದರೆ ಮಾತ್ರ ಸಾಧಕರಾಗಬಹುದು. ನಮ್ಮ ಕಾರ್ಯದಲ್ಲಿ ಸದುದ್ದೇಶವಿದ್ದರೆ ಸಫಲತೆ ನಮ್ಮ ಕೈ ಹಿಡಿಯುತ್ತದೆ ಎಂದರು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವ ಕಾಲಘಟ್ಟದಲ್ಲಿ ವಿದ್ಯಾಸಂಸ್ಥೆಗಳು ನಿಜವಾದ ಸಾಧಕರನ್ನು ಗುರುತಿಸಿದರೆ ವಿದ್ಯಾರ್ಥಿಗಳಿಗೆ ಸಾಧನೆಯ ಅರಿವಾಗುತ್ತದೆ. ಎಂದರು. ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಧರ್ ಹೆಚ್ ಜಿ, ವಿಶೇಷಾಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಬಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಘವೇಂದ್ರ, ವಿದ್ಯಾರ್ಥಿ ಸಂಯೋಜಕ ನಿರಂಜನ್ ಹಾಗೂ ಧನ್ಯಶ್ರೀ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಿರಂಜನ್ ಸ್ವಾಗತಿಸಿ, ಜಿನಪ್ರಕಾಶ್ ವಂದಿಸಿದರು. ಸ್ವಾತಿ ನಿರೂಪಿಸಿದರು.
ವಿವರ್ಥನ -2024 ಪ್ರತಿಭಾನ್ವೇಷಣೆಯ ಸಮಗ್ರ ಪ್ರಶಸ್ತಿಯನ್ನು ಅಂಬಿಕಾ ಕಾಲೇಜು ಬಪ್ಪಳಿಗೆ ಹಾಗೂ ರನ್ನರ್ ಅಪ್ ಪ್ರಶಸ್ತಿಯನ್ನು ಶ್ರೀ ರಾಮ ಕಾಲೇಜು ಕಲ್ಲಡ್ಕ ಪಡೆದುಕೊಂಡಿತು.