ವಿಚಾರಣೆಗಾಗಿ ಕರೆತಂದಿದ್ದ ಕೈದಿಯೊಬ್ಬ ನ್ಯಾಯಾಲಯದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಇಂದು ಬೆಳಗ್ಗೆ ಬೆಳಗಾವಿಯಲ್ಲಿ ನಡೆದಿದೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿ ಕಡಬ ಮೂಲದ ಜಯೇಶ್ ಪೂಜಾರಿ ಎಂಬಾತನನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಆಗ, ‘ನ್ಯಾಯಾಲಯದಲ್ಲಿ ನನ್ನ ಅಹವಾಲು ಸ್ವೀಕರಿಸುತ್ತಿಲ್ಲ’ ಎಂದು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಈ ವೇಳೆ ವಕೀಲರು ಮತ್ತು ಜನರು ಹೊಡೆಯುತ್ತಿದ್ದಂತೆ, ಕೈದಿಯನ್ನು ರಕ್ಷಿಸಿದ ಪೊಲೀಸರು ಎಪಿಎಂಸಿ ಠಾಣೆಗೆ ಕರೆದೊಯ್ದು ವಿಚಾರಣೆ ಮುಂದುವರಿಸಿದ್ದಾರೆ ಎಂದು ವರದಿ ತಿಳಿಸಿದೆ.
‘ತಾನು ದಾವೂದ್ ಇಬ್ರಾಹಿಂ ತಂಡದಲ್ಲಿದ್ದೇನೆ’ ಎಂದು ಹೇಳಿಕೊಂಡಿದ್ದ ಜಯೇಶ್ ಪೂಜಾರಿ, ಈ ಹಿಂದೆ ಜೈಲಿನಲ್ಲಿ ಇದ್ದುಕೊಂಡೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಬೆದರಿಕೆ ಕರೆ ಹಾಕಿದ್ದ ಎಂದು ತಿಳಿದು ಬಂದಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಕೈದಿ ಜಯೇಶ್ ಪೂಜಾರಿ 2008ರಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ. 12-08-2016ರಲ್ಲಿ ಮಂಗಳೂರು 5ನೇ ಸೆಷನ್ಸ್ ನ್ಯಾಯಾಲಯ ಜಯೇಶ್ ಪೂಜಾರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆದರೆ, 2017ರಲ್ಲಿ ಗಲ್ಲು ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡಾಗಿತ್ತು. ಈತ ಮೂಲತಃ ಕಡಬ ತಾಲೂಕು ಶಿರಾಡಿ ನಿವಾಸಿ. 2018ರಲ್ಲಿ ಅಂದಿನ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ ಕರೆ ಮಾಡಿದ್ದ ಈತ 1-5-2019ರಂದು ಮೈಸೂರು ಜೈಲಿಗೆ ಸ್ಥಳಾಂತರಗೊಂಡಿದ್ದ. ಬಳಿಕ 14- 09-2021ರಂದು ಮರಳಿ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು ಎನ್ನಲಾಗಿದೆ.