ದೆಹಲಿ: ವಿಶ್ವದ 4ನೇ ಅತಿ ದೊಡ್ಡ ಸೇನೆಯಾದ ಭಾರತೀಯ ಸೇನೆಯ ಹೊಸ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿಯವರನ್ನು ಸರಕಾರ ನೇಮಕ ಮಾಡಿದೆ.
ಹಾಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆಯವರ ಅಧಿಕಾರಾವಧಿ ಜೂನ್ 30ಕ್ಕೆ ಮುಕ್ತಾಯವಾಗಲಿರುವ ಹಿನ್ನಲೆಯಲ್ಲಿ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ.
ಪರಮ ವಿಶಿಷ್ಟ ಸೇವಾ ಪದಕ ಪುರಸ್ಕೃತರಾಗಿರುವ ದ್ವಿವೇದಿ, ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜೂ.30 ರಂದು ಸಂಜೆ ಜನರಲ್ ಪಾಂಡೆಯವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.
1964ರಲ್ಲಿ ಜನಿಸಿದ ಲೆಫ್ಟಿನೆಂಟ್ ಜನರಲ್ ದ್ವಿವೇದಿ ಜಮ್ಮು & ಕಾಶ್ಮೀರ ರೈಫಲ್ಸ್ ನಲ್ಲಿ 1984ರ ಡಿಸೆಂಬರ್ 15ರಂದು ನಿಯೋಜನೆಗೊಂಡಿದ್ದರು. 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಮಾಂಡ್ ಆಫ್ ರೆಜಿಮೆಂಟ್ (18 ಜಮ್ಮು & ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಡಿಐಜಿ, ಅಸ್ಸಾಂ ರೈಫಲ್ಸ್ ಮತ್ತಿತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎನ್ನಲಾಗಿದೆ. ಉತ್ತರ ಕಮಾಂಡ್ ನ ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ 2022ರಿಂದ 24ರವರೆಗೆ ಕಾರ್ಯನಿರ್ವಹಿಸಿದ್ದಾರೆ.