ಪುತ್ತೂರು : ನಗರದ ಧರ್ಮಸ್ಥಳ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ವತಿಯಿಂದ ಉದ್ಯೋಗಾಧಾರಿತ ಡಿಪ್ಲೋಮ ಮತ್ತು ಬಿಬಿಎ ಏವಿಯೇಶನ್ ಕೋರ್ಸ್ ಗೆ ಸಂಬಂಧಿಸಿದ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ಸಂಸ್ಥೆಯ ಚೆಯರ್ ಮ್ಯಾನ್ ಸುಜಾತ ಬೈರಿ ದೀಪ ಬೆಳಗಿಸಿ ಉದ್ಘಾಟಿಸಿ, ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ಕೋರ್ಸುಗಳ ಬಗ್ಗೆ ಹಾಗೂ ಸಂಸ್ಥೆಯು ನಡೆದು ಬಂದ ಹಾದಿಯನ್ನು ವಿವರಿಸಿದರು.
ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ಸಂಸ್ಥೆಯ ತರಬೇತುದಾರರಾದ ಶ್ರುತಿ, ಶ್ರೀಮಂಜು ಕಿರಣ್ ಬೆಂಗಳೂರು ಸ್ಕೈ ಬರ್ಡ್ ಏವಿಯೇಶನ್ ಕಾಲೇಜಿನಲ್ಲಿ ನಡೆಯುತ್ತಿರುವ ತರಗತಿಗಳು, ವಿದ್ಯಾರ್ಹತೆ ಕೋರ್ಸುನ ಕಲಿಕೆಯಿಂದ ಆಗುವ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅತಿಥಿಯಾಗಿ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಪ್ರತಿಯೊಬ್ಬರಿಗೆ ಒಂದು ಕನಸು ಇರುತ್ತದೆ. ಹಕ್ಕಿಯಂತೆ ಹಾರಬೇಕು, ಮೀನಿನಂತೆ ಈಜಬೇಕು, ನೀರಿನಂತೆ ಹರಿಯಬೇಕು. ಅದರಂತೆ ಮಕ್ಕಳೆಲ್ಲ ಇಂತಹ ಸಂಸ್ಥೆಗಳಲ್ಲಿ ಓದಿ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಗೋಕುಲ್ ನಾಥ್ ಪಿ.ವಿ. ಮಾತನಾಡಿ, ಏವಿಯೇಶನ್ ಕೋರ್ಸ್ ಗಳಿಗೆ ನಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಹೋಗದೆ ನಮ್ಮ ಪುತ್ತೂರಿನಲ್ಲಿಯೇ ಕಲಿಯುವಂತಾಗ ಬೇಕು. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಈ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಸಂಸ್ಥೆಯ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ದಿವ್ಯ, ಸುಷ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್, ಮುಖ್ಯಶಿಕ್ಷಕಿ ಪ್ರಮೀಳಾ ಎನ್.ಡಿ, ಉಪನ್ಯಾಸಕ ವೃಂದ, ಸಿಬ್ಬಂದಿವರ್ಗ ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಮಧುಶ್ರೀ, ಹರ್ಷಿತ, ಸುಷ್ಮ ಪ್ರಾರ್ಥಿಸಿದರು. ವೃದ್ಧಿ ಸ್ವಾಗತಿಸಿದರು, ಸಾನ್ವಿ ವಂದಿಸಿದರು. ಉಪನ್ಯಾಸಕಿ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು.