ಮಾಣಿಲ: ಹಿರಿಯರು ಮಾಡಿದ ತ್ಯಾಗದ ತಿಳುವಳಿಕೆಯಿಂದ ಅವರ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯ ಇಂದು ನಡೆಯಬೇಕಾಗಿದೆ. ಯುವ ಪೀಳಿಗೆಗೆ ಸಾರ್ಥಕ ಬದುಕನ್ನು ನಡೆಸಲು ಸಂಸ್ಕಾರ ನೀಡುವುದರೊಂದಿಗೆ ನಮ್ಮ ಧಾರ್ಮಿಕ ಆಚರಣೆಗಳು ಮಾನಸಿಕವಾಗಿ ಸತ್ಪರಿಣಾಮ ಬೀರುವಂತೆ ಅನುಷ್ಠಾನವಾಗಬೇಕೆಂದು ಶ್ರೀಧಾಮ ಮಾಣಿಲದ ಪರಮಹಂಸ ಶ್ರೀ ಮೋಹನದಾಸ ಸ್ವಾಮೀಜಿ ನುಡಿದರು.
ಮಾಣಿಲ ಕ್ಷೇತ್ರದಲ್ಲಿ ಜರಗಿದ ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಕೇಂದ್ರೀಯ ಸಮಿತಿಯ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಕುಕ್ಕಾಜೆ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ 15ನೇ ಪ್ರತಿಷ್ಠ ವರ್ಧಂತಿಯ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಬಿಡುಗಡೆ ಗೊಳಿಸಿ, ಪ್ರತಿಷ್ಠಾನದ ವತಿಯಿಂದ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುವ ಪ್ರಯತ್ನ ಉತ್ತಮ ಯೋಜನೆ ಎಂದು ತಿಳಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಯಂ. ಜಯರಾಮ ಭಂಡಾರಿ ಮಾತನಾಡಿ, ಹಿರಿಯರು ಮಾಡುವ ಸೇವಾ ಕಾರ್ಯದಿಂದ ಸಮಾಜ ಪ್ರೇರಣೆ ಪಡೆಯುವಂತಾಗಬೇಕು. ತಾಲೂಕು ಘಟಕಗಳು ಸಕ್ರಿಯವಾಗಿ ಕೇಂದ್ರ ಸಮಿತಿಗೆ ಹೆಚ್ಚಿನ ಬಲ ನೀಡಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ಮಾತನಾಡಿ, ಡಿಸೆಂಬರ್ ನಲ್ಲಿ ಜರಗುವ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವದಲ್ಲಿ ಅರ್ಹರಿಗೆ ಸೇವಾ ಕಾರ್ಯಗಳು ತಲುಪುವಂತೆ ಸದಸ್ಯರು ಬದ್ಧತೆಯಿಂದ ಸಹಕರಿಸಬೇಕೆಂದರು.
ಪ್ರತಿಷ್ಠಾನದ ಸದಸ್ಯರಾದ ಅನಾರು ಕೃಷ್ಣಶರ್ಮ ಮತ್ತು ಬಾಲಕೃಷ್ಣ ನಾಯಕ್ ಕೋಕಳ ಸ್ವಾಮೀಜಿಯವರನ್ನು ಪ್ರತಿಷ್ಠಾನದ ವತಿಯಿಂದ ಗೌರವಿಸಿದರು.
ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ, ವಾರಿಜಾ ಸುವರ್ಣ, ಪುತ್ತೂರು ಘಟಕದ ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಸೋಮನಾಥ ಬೇಕಲ್, ಚಂದ್ರಕಲಾ ಎಸ್ ಬೇಕಲ್, ಉದಯಶಂಕರ್ ರೈ ಪುಣಚ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ವಂದಿಸಿದರು. ಪ್ರತಿಷ್ಠಾನದ ಟ್ರಸ್ಟಿ ದುಗ್ಗಪ್ಪ. ಎನ್ ಕಾರ್ಯಕ್ರಮ ನಿರೂಪಿಸಿದರು.