ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ವಿಶ್ವ ಪರಿಸರ ವರ್ಷದ ಧ್ಯೇಯ ನಮ್ಮ ಭೂಮಿ – ನಮ್ಮ ಭವಿಷ್ಯ- ನಾವು ಪರಿಸರದ ಪುನರುತ್ಥಾನದ ಪೀಳಿಗೆ ಆಧಾರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೀಪ್ತಿ ರಘುನಾಥ್ ಮಾತನಾಡಿ, ನಮ್ಮ ಹಿರಿಯರು ಪರಿಸರದ ಅವಿಭಾಜ್ಯ ಅಂಗವಾಗಿದ್ದರು. ಇಂದು ಸ್ವಾರ್ಥದ ಬದುಕಿನಲ್ಲಿ ವೈಯುಕ್ತಿಕ ಸುಖಕ್ಕೆ ಮಹತ್ವ ನೀಡುತ್ತಾ ಪರಿಸರವನ್ನು ಮರೆಯುತ್ತಿದ್ದೇವೆ. ಪ್ರತಿದಿನವೂ ಪರಿಸರ ದಿನವಾದಾಗ ಸ್ವಚ್ಛ-ಸುಂದರ ಬಾಳಿನ ಸವಿಯನ್ನು ನಾವು ಸವಿಯುವಂತಾಗಬೇಕು ಎಂದರು.
ಶಾಲಾ ಆಡಳಿತ ಮಂಡಳಿ ಸದಸ್ಯ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲಸಂರಕ್ಷಣೆಯ ವಿಧಿ-ವಿಧಾನಗಳ ಸರಳ ಮಾರ್ಗಗಳನ್ನು ತಿಳಿಸಿಕೊಟ್ಟರು.
ವೇದಿಕೆಯಲ್ಲಿ ಕೃಷಿಕರಾದ ನಿವೃತ್ತ ತಹಶೀಲ್ದಾರ ಎಂ.ರಘುನಾಥ್, ಪ್ರಾಥಮಿಕ ಮತ್ತು ಪ್ರೌಢವಿಭಾಗದ ಮುಖ್ಯಶಿಕ್ಷಕರಾದ ನಳಿನಿ ವಾಗ್ಲೆ, ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಅನಂತರ ಪ್ರಾಥಮಿಕ ವಿಭಾಗದ ಮಕ್ಕಳು, ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಘೋಷಣೆಯೊಂದಿಗೆ ಜಲ-ಸಂರಕ್ಷಣೆಯ ಭಿತ್ತಿ ಪತ್ರಗಳನ್ನು ಶಾಲಾ ಆವರಣದಲ್ಲಿ ಅಂಟಿಸುತ್ತಾ ಮಹತ್ವ ತಿಳಿಸಿದರು.
ಶಾಲಾ ವೃತಿಕಾ ವಿಜ್ಞಾನ ಸಂಘದ ಸಂಯೋಜಕ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು.