ಪುತ್ತೂರು :ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಮಡಿವಾಳರ ಸಂಘದ ಜಂಟಿ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಸಂಸ್ಮರಣಾ ಜ್ಯೋತಿ ಪ್ರಜ್ವಲಿಸಿ ಮಾತನಾಡಿ, ಸಮಾಜದಲ್ಲಿನ ಅಸಮಾನತೆ ವಿರುದ್ದ ಹೋರಾಡುವ ಮೂಲಕ ಶರಣರು ಸಮಾನತೆ ತಂದುಕೊಡುವಲ್ಲಿ ಬಹಳಷ್ಟು ಪ್ರಯತ್ನಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ಮಾಚಿದೇವ ಮಡಿವಾಳರ ಆದರ್ಶ ಒಂದಾಗಿದ್ದು, ಅವರ ಜಯಂತಿಯನ್ನು ಆಚರಿಸುವ ಮೂಲಕ ಸಮಾಜಕ್ಕೆ ಅವರ ಸಂದೇಶಗಳನ್ನು ಸಾರಲಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಶರಣರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಅವದ ಆದರ್ಶ ಪಾಲಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಸಮಾಜಕ್ಕೆ ಅವರ ಜಯಂತಿ ಆಚರಣೆ ದಾರಿದೀಪವಾಗಿದ್ದು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ವೇದಿಕೆಯಲ್ಲಿ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಪಿ.ಎನ್.ಸುಭಾಶ್ಚಂದ್ರ ಉಪಸ್ಥಿತರಿದ್ದು ಶ್ರೀ ಮಾಚಿದೇವ ಮಡಿವಾಳರ ಕುರಿತು ಮಾತನಾಡಿ, ಮಾಚಿದೇವ ಮಡಿವಾಳರು ವೃತ್ತಿಯಲ್ಲಿ ಮಡಿವಾಳರಾಗಿದ್ದರೂ ಪ್ರವೃತಗತಿಯಲ್ಲಿ ಶರಣರಾಗಿದ್ದರು. ಅವರ ಆದರ್ಶ ಎಲ್ಲಾ ಸಮಾಜಕ್ಕೂ ಪಾಲನೀಯವಾಗಿದೆ ಎಂದರು.
ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿ ವಂದಿಸಿದರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಮಡಿವಾಳರ ಸಂಘದ ಪದಾಧಿಕಾಗಳು ಉಪಸ್ಥಿತರಿದ್ದರು.