ಅತ್ಯಾಚಾರ ಪ್ರಕರಣ : ಸ್ವಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಆಶ್ರಮದಲ್ಲಿ ಶಿಷ್ಯೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ

ಗಾಂಧಿನಗರ : ಶಿಷ್ಯೆಯ ಅತ್ಯಾಚಾರ ಎಸಗಿದ ಕುರಿತು 2013ರಲ್ಲಿ ದಾಖಲಾದ ಪ್ರಕರಣದಲ್ಲಿ ಅಪರಾಧಿಯಾಗಿರುವ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುಗೆ (77) ಗುಜರಾತ್‌ನ ಗಾಂಧಿನಗರದ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಸೆಕ್ಷನ್ 376 ಮತ್ತು 377 ಅಡಿಯಲ್ಲಿ ಅಸಾರಾಂ ಬಾಪುವಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗಾಂಧಿನಗರ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಡಿ.ಕೆ. ಸೋನಿ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ಸಂತ್ರಸ್ತೆಗೆ 50,000 ರೂ. ಪರಿಹಾರ ನೀಡುವಂತೆಯೂ ಅಪರಾಧಿಗೆ ಕೋರ್ಟ್​ ಸೂಚಿಸಿದೆ.





























 
 

ಸೋಮವಾರ ನ್ಯಾಯಾಲಯ ಶಿಷ್ಯೆಯ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ ಎಂದು ತೀರ್ಪು ನೀಡಿತ್ತು. ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಸಾರಾಂ ಅವರ ಪತ್ನಿ ಸೇರಿದಂತೆ ಇತರ ಆರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಹಮದಾಬಾದ್‌ನ ಚಂದ್‌ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಅಸಾರಾಂ ಬಾಪು 2001 ರಿಂದ 2006 ರವರೆಗೆ ಗಾಂಧಿನಗರದ ಹೊರವಲಯದಲ್ಲಿರುವ ತಮ್ಮ ಆಶ್ರಮದಲ್ಲಿ ಶಿಷ್ಯೆಯೊಬ್ಬರ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾರೆ. ಸೂರತ್ ಮೂಲದ ಸಂತ್ರಸ್ತೆಯ ದೂರಿನ ಮೇರೆಗೆ 2013ರಲ್ಲಿ ಅಸಾರಾಂ ಬಾಪು ಮತ್ತು ಇತರ ಏಳು ಜನರ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಲಾಗಿತ್ತು.

2013ರ ಆಗಸ್ಟ್​ 31ರಂದು ಅಸಾರಾಂ ಬಾಪುವನ್ನು ಬಂಧಿಸಲಾಗಿತ್ತು. ಏಳು ಮಂದಿ ಆರೋಪಿಗಳ ಪೈಕಿ ಒಬ್ಬರು ವಿಚಾರಣೆ ಬಾಕಿ ಇರುವಾಗ ಅಕ್ಟೋಬರ್ 2013 ರಲ್ಲಿ ಸಾವನ್ನಪ್ಪಿದ್ದರು. 2014ರ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಈ ವಿವಾದಿತ ದೇವಮಾನವ ಈಗಾಗಲೇ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಜೋಧಪುರದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ. ಗಾಂಧಿ ನಗರದ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಅಸಾರಾಂ ಬಾಪುವನ್ನು 2018ರಲ್ಲಿ ಜೋಧ್‌ಪುರ ನ್ಯಾಯಾಲಯವು ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಶಿಷ್ಯೆಯ ಅತ್ಯಾಚಾರ ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ ನೀಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top