ಪುತ್ತೂರು : ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್ತೀರ್ಥದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ.1 ಬುಧವಾರದಿಂದ 6 ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಫೆ.೧ ಬುಧವಾರ ಸಂಜೆ ಬಲಿವಾಡು, ಹಸಿರುವಾಣಿ ಶೇಖರಣೆ, ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ದೈವಗಳ ಭಂಡಾರ ಆಗಮನ, ರಾತ್ರಿ ಅತ್ತಾಳ ಪೂಜೆ, ಮಹಾಪೂಜೆ, ಮಂಗಳಾರತಿ ನಡೆಯಲಿದೆ. ಫೆ.2 ರಂದು ಪ್ರಾತಃಕಾಲ ಪೂಜೆ, ದೇವತಾ ಪ್ರಾರ್ಥನೆ, ಬೆಂದ್ರ್ತೀರ್ಥ ಪೂಜೆ, ನವಕ ಕೊಪ್ಪರಿಗೆ, ಹಣಪತಿ ಹವನ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶ್ರೀ ದೇವರ ಬಲಿ ಉತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳಿಗೆ ತಂಬಿಲ, ರಾತ್ರಿ ಕಾರ್ತಿಕ ಪೂಜೆ, ಶ್ರೀ ದೇವರ ಬಲಿ ಹೊರಟು ಬೆಂದ್ರ್ತೀರ್ಥಕ್ಕೆ ಸವಾರಿ, ಭೂತಬಲಿ ಉತ್ಸವ, ಕಟ್ಟೆಪೂಜೆ, ವಸಂತಕಟ್ಟೆ ಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಫೆ.3 ರಂದು ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಮಧ್ಯಾಹ್ನ ದೈವಗಳ ತಂಬಿಲ, ಸಂಜೆ ಕದಿಕೆ ಚಾವಡಿಯಲ್ಲಿ ಮರಕ ತೋರಣ ಏರಿಸುವುದು, ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ, ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಹೂವಿನ ಪೂಜೆ, ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ನಡೆದು ಬಳಿಕ ದೈವಗಳ ಭಂಡಾರ ದೇವಸ್ಥಾನದಿಂದ ಹೊರಟು ಕದಿಕೆ ಚಾವಡಿಗೆ ಆಗಮಿಸಲಿದೆ. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆ.4 ರಂದು ಕದಿಕೆ ಚಾವಡಿಯಲ್ಲಿ ದೈವಗಳ ನೇಮೋತ್ಸವ, ಫೆ.5 ರಂದು ಪೂಮಾಣಿ ದೈವ, ಫೆ.6 ರಂದು ಮಲರಾಯ ಮತ್ತು ರಾಜನ್ ದೈವಗಳ ನೇಮ ನಡೆಯಲಿದೆ. ಸಂಜೆ ನವಕ ಗಣಹೋಮ, ತಂಬಿಲ, ದೈವಗಳ ಭಂಡಾರ ಕದಿಕೆ ಚಾವಡಿಯಿಂದ ದೇವಸ್ಥಾನಕ್ಕೆ ಆಗಮನದ ಬಳಿಕ ಪಿಲಿಚಾಮುಂಡಿ ದೈವದ ನೇಮ ನಡೆಯಲಿದೆ. ರಾತ್ರಿ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೈವಗಳ ಭಂಡಾರ ನಿರ್ಗಮನದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.