ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಇಷ್ಟು ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಜರ್ಮನಿಯಿಂದ ಬಂದು ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 4.05ಕ್ಕೆ ಮ್ಯೂನಿಕ್ ನಿಂದ ಹೊರಟ ಲುಫ್ತಾನ್ನಾ ಏರ್ ಲೈನ್ಸ್ ವಿಮಾನ ತಡರಾತ್ರಿ 12.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯ್ತು. ಪ್ರಜ್ವಲ್ ರೇವಣ್ಣ ಅರೆಸ್ಟ್ ಮಾಡಲಿಕ್ಕಾಗಿ ಏರ್ ಪೋರ್ಟ್ ನಲ್ಲಿ ಎಸ್ಐಟಿ ಅಧಿಕಾರಿಗಳ ಟೀಂ ಕಾದು ಕುಳಿತಿತ್ತು. ವಿಮಾನ ನಿಲ್ದಾಣದ ಭದ್ರತಾ ಪಡೆಯಿಂದ ವಿಶೇಷ ಅನುಮತಿ ಪಡೆದು ವಲಸೆ ವಿಭಾಗದ ಬಳಿ ಕಾದು ಕುಳಿತಿದ್ರು. ಪ್ರಜ್ವಲ್ ವಿಮಾನದಿಂದ ಕೆಳಗಿಳಿದು ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಅವರ ಪಾಸ್ ಪೋರ್ಟ್ ಸೇರಿದಂತೆ ಕೆಲ ದಾಖಲಾತಿಗಳನ್ನು ಪರಿಶೀಲಿಸಿ, ನಂತರ ಐವರು ಮಹಿಳಾ ಪೊಲೀಸರ ನೇತೃತ್ವದಲ್ಲಿ ಪ್ರಜ್ವಲ್ ನನ್ನು ಬಂಧಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಎಸ್ಐಟಿ, ಮಾಧ್ಯಮಗಳ ಕಣ್ತಪ್ಪಿಸಿ ಕೆಐಎಬಿ ಹಿಂದಿನ ಗೇಟ್ ಮೂಲಕ ಕರೆದೊಯ್ದಿದ್ದಾರೆ. ಏರ್ ಪೋರ್ಟ್ ನಿಂದ ಬೆಂಗಳೂರಿನ ಎಸ್ಐಟಿ ಕಚೇರಿಯತ್ತ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇತ್ತ ಸಿಐಡಿ ಕಚೇರಿ ಬಳಿ ಪೊಲೀಸರು ಅಲರ್ಟ್ ಆಗಿದ್ದು, ಇಬ್ಬರು ಇನ್ಸ್ ಪೆಕ್ಟರ್ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ವಿಮಾನ ನಿಲ್ದಾಣದಿಂದ ಐವರು ಮಹಿಳಾ ಪೊಲೀಸ್ ಸಿಬ್ಬಂದಿಯೇ ಜೀಪ್ ನಲ್ಲಿ ಕೂರಿಸಿಕೊಂಡು ಎಸ್ಐಟಿ ವಿಚಾರಣಾ ಸ್ಥಳಕ್ಕೆ ಕರೆದು ತಂದಿದ್ದಾರೆ. ಮಧ್ಯರಾತ್ರಿ 2 ಗಂಟೆ 10 ನಿಮಿಷಕ್ಕೆ ಪ್ರಜ್ವಲ್ ರನ್ನು ಎಸ್ಐಟಿ ಕಚೇರಿಗೆ ಕರೆತಂದ ಬಳಿಕ ಕೆಲ ಕಾಲ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿತ್ತು. ಎಸ್ಐಟಿ ಕಚೇರಿಯಲ್ಲೇ ಊಟದ ವ್ಯವಸ್ಥೆ ಮಾಡಿದ್ದರು. ಬಿಗಿ ಬಂದೋಬಸ್ ನಲ್ಲಿ ರಾತ್ರಿಯಿಡೀ ಎಸ್ಐಟಿ ಕಚೇರಿಯಲ್ಲೇ ಪ್ರಜ್ವಲ್ ಕಳೆದಿದ್ದು, ಇಂದು ಮುಂದಿನ ಕಾನೂನು ಪ್ರಕ್ರಿಯೆಗಳು ಜರುಗಲಿವೆ.
ಏರ್ ಪೋರ್ಟ್ ನಲ್ಲಿ ಮೂವರು ಮಹಿಳಾ ಅಧಿಕಾರಿಗಳಿಂದಲೇ ಪ್ರಜ್ವಲ್ ಅರೆಸ್ಟ್ ಮಾಡಿಸಿದ ಎಸ್ಐಟಿ ಅಧಿಕಾರಿಗಳು. ಜೀಪ್ ಚಾಲಕ ಹೊರತುಪಡಿಸಿದ್ರೆ ಉಳಿದವರೆಲ್ಲ ಮಹಿಳಾ ಅಧಿಕಾರಿಗಳೇ ಇದ್ದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೆಣ್ಣನ್ನು ಕೇವಲವಾಗಿ ನೋಡಿದ ಪ್ರಜ್ವಲ್ ಗೆ ಮುಜುಗರ, ಅವಮಾನಿಸಲು, ನಾಚಿಕೆಪಡುವಂತಾಗಲಿ ಎಂದು ಮಹಿಳಾ ಅಧಿಕಾರಿಗಳಿಂದಲೇ ಅರೆಸ್ಟ್ ಮಾಡಿಸಿದ ಎಸ್ಐಟಿ ಆ ಮೂಲಕ ಹೆಣ್ಣು ಅಬಲೆಯಲ್ಲ, ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಂದೇಶ ರವಾನಿಸಿದೆ.