ಪುತ್ತೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ವಾರಂಭ ಯೋಜನೆಯಾದ ‘ವಿದ್ಯಾಧ್ವನಿ’ ಶಿಕ್ಷಕರ ಕಲಿಕಾ ಕಾರ್ಯಾಗಾರವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಯಿತು.
ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಾದ ನಾವು ಮಕ್ಕಳಲ್ಲಿರುವ ವೈಯಕ್ತಿಕ ವಿಭಿನ್ನತೆಗೆ ಅನುಗುಣವಾಗಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶೈಕ್ಷಣಿಕ ಯೋಜನೆಯನ್ನು ರೂಪಿಸಬೇಕಾದ ಅಗತ್ಯತೆಯನ್ನು ತಿಳಿಸಿದರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಹೆಗ್ಡೆ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳ ದೈಹಿಕ ಮಾನಸಿಕ, ಬೌದ್ಧಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಗುರುತಿಸಿ ಆರಂಭದಲ್ಲೇ ಚಿಕಿತ್ಸೆ ನೀಡುವ ವಿಧಿ- ವಿಧಾನಗಳನ್ನು ಶಿಕ್ಷಕರಾದವರು ತಿಳಿದಿರಬೇಕು ಎಂದು ಹೇಳಿದರು.
ಕಾರ್ಯಾಗಾರದ ಎರಡನೇ ದಿನದಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ವಿವೇಕಾನಂದ ವಿದ್ಯಾಸಂಸ್ಥೆಗಳ ಧ್ಯೇಯ – ಉದ್ದೇಶಗಳನ್ನು ತಿಳಿಸಿ ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗುತ್ತಾ ಮುನ್ನಡೆಯಲು ಪಠ್ಯದೊಂದಿಗೆ ಮಕ್ಕಳಲ್ಲಿ ಧೈರ್ಯ, ಭಾರತೀಯತೆಯ ಪ್ರಜ್ಞೆ ಬೆಳೆಸುವಲ್ಲಿ ಶಿಕ್ಷಕರು ಕಾರ್ಯನಿರತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಾಗಾರದ ವೀಡಿಯೋ ಕ್ಲಿಪಿಂಗ್ ಹಾಗೂ ಪೋಸ್ಟರ್ ತಯಾರಿ ಸ್ಪರ್ಧಾ ವಿಜೇತ ಶಿಕ್ಷಕರಿಗೆ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ನಳಿನಿ ವಾಗ್ಲೆ ಬಹುಮಾನ ವಿತರಿಸಿದರು.
ಶಾಲಾ ಅಧ್ಯಕ್ಷ ರಮೇಶ್ಚಂದ್ರ, ಸಂಚಾಲಕ ವಸಂತ ಸುವರ್ಣ, ಕೋಶಾಧಿಕಾರಿ ಅಶೋಕ್ ಕುಂಬ್ಳೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಕಾರ್ಯಯೋಜನೆಯ ರೂಪುರೇಷೆಗಳನ್ನು ತಿಳಿಸಿದರು.