ಭಾರತದ ವಿಶೇಷ ಅಣಬೆ ಪ್ರಭೇದ ಅಂತರಾಷ್ಟ್ರೀಯ ಫುಡ್ ಜರ್ನಲ್ ನಲ್ಲಿ ದಾಖಲೆ | ಪುತ್ತೂರು ತಾಲೂಕಿನ ಮುಡಿಪಿನಡ್ಕದ ಕೃಷಿಕ ಹರೀಶ್ ರೈ ದೇರ್ಲರ ಸಾಧನೆ

ಪುತ್ತೂರು: ಪುತ್ತೂರಿನ ಮುಡಿಪಿನಡ್ಕದ ಕೃಷಿಕ ಹರೀಶ್ ರೈ ದೇರ್ಲ ಅವರು ತಮ್ಮ ಸತತ ಪ್ರಯತ್ನ ಹಾಗೂ ಸಿ.ಪಿ.ಸಿ.ಆರ್.ಐ. ವಿಜ್ಞಾನಿಗಳ ಅಧ್ಯಯನದ ಕಾರಣದಿಂದ ಭಾರತದ ವಿಶೇಷವಾದ ಅಣಬೆ ಪ್ರಭೇದವೊಂದನ್ನು ಅಂತರಾಷ್ಟ್ರೀಯ ಫುಡ್ ಜರ್ನಲ್ ನಲ್ಲಿ(EJFA) ದಾಖಲಾಗುವಂತೆ ಮಾಡಿದ್ದಾರೆ.

ಪುತ್ತೂರಿನ ತಾಲೂಕಿನ ಮುಡಿಪಿನಡ್ಕದ ಕೃಷಿಕ ಹರೀಶ್ ರೈ ಅವರು ಅಡಿಕೆ ಸಿಪ್ಪೆಯ ಮೂಲಕ ನಿರ್ದಿಷ್ಟ ಪ್ರಭೇದದ ಅಣಬೆ ತಳಿಯನ್ನು ಕಳೆದ ಸುಮಾರು ಒಂದು ವರ್ಷದಿಂದ ಬೆಳೆಸುತ್ತಿದ್ದಾರೆ. ಇದೀಗ 24 ನೇ ಬ್ಯಾಚ್ ಮುಗಿಸಿದ್ದಾರೆ. 

ಅನೇಕ ವರ್ಷಗಳಿಂದ ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಅಣಬೆಯನ್ನು ಹರೀಶ್ ರೈ ಅವರ ಮಿತ್ರರೊಬ್ಬರು ಬಳಕೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದುಕೊಂಡು ತಾವೂ ಬೆಳೆಯಲು ಆರಂಭ ಮಾಡಿದರು. ಅಡಿಕೆ ಸಿಪ್ಪೆಯನ್ನು ಕೊಳೆಯಲು ಹಾಕುವ ವೇಳೆ ಅದರಲ್ಲಿ ಬರುವ ಅಣಬೆಯು ಬಹಳ ಅತ್ಯುತ್ತಮ ಆಹಾರವಾಗಿದೆ. ಹೀಗಾಗಿ ಈ ಬಗ್ಗೆ ಬೆಳೆಯವುದರ ಕಡೆಗೆ ಆಸಕ್ತರಾದರು.

































 
 

ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಈ ಪ್ರಭೇದದ ಅಣಬೆಯ ಬಗ್ಗೆ ವಿಟ್ಲ ಮತ್ತು ಕಾಸರಗೋಡಿನ ಸಿ.ಪಿ.ಸಿ.ಆರ್.ಐ. ಸಂಶೋಧಕರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಕೆಲವು ಸಮಯಗಳ ಕಾಲ ಸೂಕ್ಷ್ಮವಾಗಿ ಗಮನಿಸಿ ಅಡಿಕೆ ಸಿಪ್ಪೆಯಲ್ಲಿ ಬೆಳೆಯುತ್ತಿರುವ ಕಾಪ್ರಿನೋಪ್ಸಿಸ್ ಸಿನೆರಿಯಾ ಎಂಬ ಖಾದ್ಯ ಅಣಬೆ ಪ್ರಭೇದವನ್ನು ಗುರುತಿಸಿದ್ದಾರೆ.

ಈ ಅಧ್ಯಯನ ಹಾಗೂ ಕೃಷಿಕರ ಪ್ರಯತ್ನವು, ಸಂಶೋಧನೆಗಳನ್ನು ಅಂತರಾಷ್ಟ್ರೀಯ ಮಟ್ಟದ ಎಮಿರೇಟ್ಸ್ ಜರ್ನಲ್ ಆಫ್ ಫುಡ್ ಅಂಡ್ ಅಗ್ರಿಕಲ್ಚರ್ ನಲ್ಲಿ ದಾಖಲಿಸಲಾಗಿದೆ. ಕಾಪ್ರಿನೋಪ್ಸಿಸ್ ತಳಿಯ ಅಣಬೆಯು ಸಾವಯವ ವಸ್ತು ಕೊಳೆಯುವಲ್ಲಿ ಅದರ ಪರಿಸರ ಪ್ರಾಮುಖ್ಯತೆಗಾಗಿ ಬೆಳೆಯುತ್ತದೆ. ಇದು ಖಾದ್ಯವಾಗಿ ಬಳಕೆ ಮಾಡಬಹುದಾಗಿದೆ.

ಸತತವಾಗಿ 24 ಬ್ಯಾಚು ಅಣಬೆ ಕೃಷಿ ಮಾಡುವ ಮೂಲಕ ಒಂದು ವರ್ಷದ ಪೂರ್ತಿ ಅವಧಿಯಲ್ಲಿ ಅಡಿಕೆ ಸಿಪ್ಪೆಯಿಂದ ಅಣಬೆ ಬೆಳೆಸಿರುವ ಹರೀಶ್ ರೈ ಅವರು, ಮನೆಗೆ ತರಕಾರಿಯಾಗಿ ಈ ಅಣಬೆಯನ್ನು ಬೆಳೆಯಲು ಸಾಧ್ಯವಿದೆ. ಯಾವುದೇ ಹೆಚ್ಚಿನ ಆರೈಕೆ ಅಗತ್ಯವಿಲ್ಲ ಎಂದು ಹೇಳುತ್ತಾರೆ.  ಕುತೂಹಲಕಾರಿಯಾದ ಅಂಶವೆಂದರೆ, ಇಲ್ಲಿ ಅಣಬೆ ಬೆಳೆಯಲು ಯಾವುದೇ ಬೀಜ ನಾಟಿ ಮಾಡಬೇಕಾಗಿಲ್ಲ. ಆ ಕೆಲಸವನ್ನು ಪ್ರಕೃತಿಯೇ ಮಾಡುತ್ತದೆ. ಹೀಗಾಗಿ ಈ ಕೃಷಿಯು ಹೆಚ್ಚಿನ ಗಮನ ಸೆಳೆದಿದೆ. ಈ ಕಾರಣದಿಂದಲೇ ವಿವಿಧ ಕ್ಷೇತ್ರಗಳ ವಿಜ್ಞಾನಿಗಳ ಗಮನವೂ ಸೆಳೆದಿವೆ ಈ ಅಣಬೆ.

ತಿನ್ನಬಹುದಾದ ಅಣಬೆ ಇದಾದ್ದರಿಂದ, ವಾಣಿಜ್ಯ ಉದ್ದೇಶಕ್ಕಾಗಿ ಹೇಗೆ ಬಳಕೆ ಮಾಡಬಹುದು ಎನ್ನುವುದರ ಬಗ್ಗೆ ಇನ್ನಷ್ಟೇ ಚಿಂತನೆ, ಪ್ರಯತ್ನ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಈ ಅಣಬೆಯೂ ರೆಸ್ಟೋರೆಂಟ್ ಪ್ರವೇಶಿಸಲು ಕೆಲಸ ನಡೆಯಬೇಕಿದೆ.

ಹೀಗಾಗಿ ವಿಜ್ಞಾನಿಗಳು ಈ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸುತ್ತಿದ್ದು, ಅಣಬೆ ಸರಿಯಾಗಿ ಬೆಳೆಯಲು ಹಾಗೂ ಪೋಷಕಾಂಶಗಳನ್ನು ಹೇಗೆ ನೀಡಬಹುದು ಇತ್ಯಾದಿಗಳ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ಜರ್ನಲ್ ನಲ್ಲಿ ಉಲ್ಲೇಖಿಸಲಾಗಿದೆ.

283 ಕಾಡು ಖಾದ್ಯ ಅಣಬೆಗಳಿಗೆ ನೆಲೆಯಾಗಿರುವ ಭಾರತವು ವಿಶ್ವದ 2000 ಕಾಡು ಖಾದ್ಯ ಅಣಬೆಗಳ ಪ್ರಭೇದವನ್ನು ಹೊಂದಿವೆ.  ಹೀಗಾಗಿ ಅಡಿಕೆ ಸಿಪ್ಪೆಯ ಅಣಬೆಯು ಖಾದ್ಯವಾಗಿ ಬಳಕೆ ಮಾಡಬಹುದು ಎನ್ನುವುದು ಈಗ ಹೆಚ್ಚಿನ ಮಹತ್ವ ಪಡೆದಿದೆ.  ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಅಣಬೆಯ ಜನಪ್ರಿಯತೆಯ ಪರಿಣಾಮವಾಗಿ ಸಸ್ಯಾಹಾರದ ಮಾದರಿಯನ್ನು ನಿರೀಕ್ಷೆ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top