ಅಧ್ಯಯನಕ್ಕೆ ಡಾ| ಮೋಹನ್ ಆಳ್ವ ನೇತೃತ್ವದ ಸಮಿತಿ ರಚನೆ
ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಸರಕಾರ ಮಹತ್ವದ ನಿಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ.
ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಕೇಶವ ಬಂಗೇರ, ಡಾ. ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್, ಪೃಥ್ವಿ ಕವತ್ತಾರು ಮಣಿಪಾಲ, ವಸಂತ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು, ಸಂಧ್ಯಾ ಆಳ್ವ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರು ಟ್ವಿಟ್ ಮಾಡಿ, ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಸಂಬಂಧ, ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ನೀಡಲು ಡಾ| ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ ಒಂದು ವಾರದಲ್ಲಿ ವರದಿ ನೀಡಲು ಸೂಚಿಸಲಾಗಿದೆ ಎಂದಿದ್ದಾರೆ.
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು ಸಂಘ, ಸಂಸ್ಥೆಗಳು ಮನವಿ ಮಾಡಿದ್ದವು. ಈ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಿ ವಾಸ್ತವಾಂಶದ ವರದಿ ಸೂಕ್ತ ಶಿಫಾರಸಿನೊಂದಿಗೆ ಸಲ್ಲಿಸಲು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಅದರಂತೆ ಅಧ್ಯಯನ ಸಮಿತಿ ರಚಿಸಲಾಗಿದೆ.