ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್ ಐಟಿ ತನಿಖೆಗೆ ಬರುವುದಾಗಿ ತಿಳಿಸಿದ್ದಾರೆ.
ಅವರ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ದೇಶದೆಲ್ಲೆಡೆ ಕಿಡಿ ಹೊತ್ತಿದ ಬಳಿಕ ಒಂದು ತಿಂಗಳ ನಂತರ ವೀಡಿಯೋ ರಿಲೀಸ್ ಮಾಡುವ ಮೂಲಕ ಪ್ರತ್ಯಕ್ಷರಾಗಿದ್ದಾರೆ.
ಪ್ರಕರಣ ಕುರಿತು ಮಾತನಾಡಿ, ರಾಜ್ಯದ ಹಾಗೂ ಜೆಡಿಎಸ್ ಕಾರ್ಯಕರ್ತರ ಕ್ಷಮೆಯಾಚಿಸಿದ್ದಾರೆ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ಕೆಲ ಶಕ್ತಿಗಳು ನನ್ನ ವಿರುದ್ಧ ಈ ರೀತಿ ಪಿತೂರಿ ಮಾಡಿದ್ದಾರೆ. ಹೀಗಾಗಿ ಎಲ್ಲರಲ್ಲಿ ಕ್ಷಮೆ ಕೇಳುವೆ ಎಂದಿದ್ದಾರೆ.
ತಮ್ಮ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದು ವಿಡಿಯೋದಲ್ಲಿ ಹೇಳಿರುವ ಪ್ರಜ್ವಲ್, ನನ್ನ ವಿಡಿಯೋಗಳ ಕುರಿತು ನನಗೆ ಮಾಧ್ಯಮ ಹಾಗೂ ಯೂಟ್ಯೂಬ್ ಮುಖಾಂತರ ತಿಳಿಯಿತು. ಈ ವಿಚಾರವನ್ನಿಟ್ಟುಕೊಂಡು ರಾಹುಲ್ ಗಾಂಧಿಯಾದಿಯಾಗಿ ಎಲ್ಲರೂ ಬಹಿರಂಗ ವೇದಿಕೆಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಈ ಎಲ್ಲಾ ಬೆಳವಣಿಗೆಯಿಂದ ನಾನು ಖಿನ್ನತೆಗೊಳಗಾಗಿದ್ದೆ. ಇದೇ ಕಾರಣದಿಂದ ನಾನು ಎಲ್ಲರಿಂದ ದೂರ ಉಳಿದಿದ್ದೆ. ನನ್ನ ನಡವಳಿಕೆಗೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿ ಹೇಳಿದ್ದಾರೆ.