ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣ ಪಿಕ್ ಪಾಕೆಟ್ ತಾಣವಾಗಿ, ಕಳ್ಳರ ಕೇಂದ್ರವಾಗಿ ಮಾರ್ಪಾಡು ಹೊಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಸ್ ಗೆ ಹತ್ತುವ ಮಹಿಳೆಯರ ನಗನಗದು ಕಳವು ನಡೆಯುತ್ತಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಕಳ್ಳರು ಹಿಡಿಯುವಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ನಿನ್ನೆ ಬೆಳಿಗ್ಗೆ ಗಂಡ ಮತ್ತು ಮಗುವಿನ ಜೊತೆ ಬಸ್ ಹತ್ತುವ ವೇಳೆ ಬ್ಯಾಗಿನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾದ ಪ್ರಕರಣ ವರದಿಯಾಗಿದೆ.
ಮೇ.23ರಂದು ಬೆಳಿಗ್ಗೆ ಬೆಳ್ತಂಗಡಿ ನಿವಾಸಿ ಶಶಿಕಲಾ ಸುಮಾರು 2ಲಕ್ಷ ಮೌಲ್ಯದ ಚಿನ್ನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮ ನಡಿಗಲ್ ಆದರ್ಶ ನಗರ ನಿವಾಸಿ ಜಗದೀಶ ಅವರ ಪತ್ನಿ ಶಶಿಕಲಾ ಅವರು ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಮಗುವಿನ ಜೊತೆ ಗೋಳ್ತಮಜಲು ಗ್ರಾಮದ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದಿದ್ದರು. ಮತ್ತೆ ವಾಪಸು ಗಂಡನ ಜೊತೆ ಬೆಳ್ತಂಗಡಿಗೆ ತೆರಳುವ ಉದ್ದೇಶದಿಂದ ಬಿಸಿರೋಡಿಗೆ ಬಂದಿದ್ದು, ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರಿಂದ ತಿಂಡಿಯನ್ನು ಪಡೆದುಕೊಂಡು ಬೆಳ್ತಂಗಡಿಗೆ ಪ್ರಯಾಣಿಸುವುದಕ್ಕೆ ಬಸ್ ಹತ್ತುವ ವೇಳೆ ಬ್ಯಾಗ್ ನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾಗಿದೆ. ಮಗುವಿನ ಜೊತೆ ಗಂಡ ಬಸ್ ಹತ್ತಿದ್ದು, ಅವರ ಹಿಂದೆ ಶಶಿಕಲಾ ಅವರು ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಿಂದ ಬ್ಯಾಗ್ ನೊಳಗಿದ್ದ ಚಿನ್ನದ ಪ್ಯಾಕೇಟ್ ನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.