ಪುತ್ತೂರು: ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ವಿವಿಧ ತಾಂತ್ರಿಕ ಮತ್ತು ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿಯನ್ನು ಮೂಡಿಸಿ ಅವರನ್ನು ಶೈಕ್ಷಣಿಕವಾಗಿ ಮತ್ತು ವೈಯಕ್ತಿಕವಾಗಿ ಆ ಕ್ಷೇತ್ರಗಳಿಗೆ ಆಕರ್ಷಿಸುವಂತೆ ಮಾಡುವ ಉದ್ದೇಶದಿಂದ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.
ಮೈಕ್ರೋಸಾಫ್ಟ್ ಆಫೀಸ್‌ನ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಾವೀಣ್ಯತೆಯನ್ನು ಹೆಚ್ಚಿಸುವುದು, ಎಚ್‌ಟಿಎಂಎಲ್ ಬಳಸಿಕೊಂಡು ವೆಬ್ ಪೇಜ್‌ಗಳ ವಿನ್ಯಾಸ, ಗೂಗಲ್ ಸೈಟ್‌ಗಳಲ್ಲಿ ವಿವಿಧ ವೆಬ್‌ಸೈಟ್‌ಗಳನ್ನು ನಿರ್ಮಿಸುವ ಬಗ್ಗೆ ಮಾರ್ಗದರ್ಶನ, ವಿಜ್ಞಾನ, ತಂತಜ್ಞಾನ. ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿನ ಹೊಸತನಗಳನ್ನು ತಿಳಿದುಕೊಳ್ಳುವುದು ಮುಂತಾದವುಗಳ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.
ನುರಿತ ಸಂಪನ್ಮೂಲ ವ್ಯಕ್ತಿಗಳು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ನೀಡಿದರು. ಮಾಹಿತಿಯ ಜತೆಗೆ ಅದಕ್ಕೆ ಪೂರಕವಾದ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.
ಪುತ್ತೂರು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್, ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹಯೋಗದಲ್ಲಿ 14 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ 28 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.