ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಹಿರಿಯ ಭೂವಿಜ್ಞಾನಿ ದಾವೂದ್
ಪುತ್ತೂರು ತಾ.ಪಂ.ನಲ್ಲಿ ಜಿಲ್ಲಾ ಅಂತರ್ಜಲ ಇಲಾಖೆಯಿಂದ ಅಂತರ್ಜಲ ಕಾರ್ಯಾಗಾರ

ಪುತ್ತೂರು : ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು ಹಾಗೂ ಜಿಲ್ಲಾ ಅಂತರ್ಜಲ ಕಛೇರಿ ಜಂಟಿ ಆಶ್ರಯದಲ್ಲಿ ಮಳೆ ನೀರಿನ ಸಂಗ್ರಹಣೆ ಮತ್ತು ಮರುಬಳಕೆ, ಅಂತರ್ಜಲ ಸಂರಕ್ಷಣೆ, ಕಲುಷಿತತೆ ತಡೆಗಟ್ಟುವಿಕೆ, ತೆರೆದ/ ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಹಾಗೂ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಕುರಿತ ಅಂತರ್ಜಲ ಕಾರ್ಯಾಗಾರ ಸೋಮವಾರ ತಾಪಂ ಸಭಾಂಗಣದಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಅಂತರ್ಜಲ ಇಲಾಖೆಯ ಹಿರಿಯ ಭೂವಿಜ್ಞಾನಿ ಶೇಕ್ ದಾವೂದ್, ಭೂಮಿಯ ಮೇಲಿರುವ ಎಲ್ಲಾ ಜೀವ ಸಂಕುಲಗಳಿಗೆ ನೀರೇ ಜೀವಾಳ. ನೀರಿನ ಬಗ್ಗೆ ನಾವು ಎಚ್ಚೆತ್ತುಕೊಂಡು ಮುಂದೆ ಎದುರಾಗುವ ಜಲ ಕ್ಷಾಮವನ್ನು ಮತ್ತಷ್ಟು ದೂರ ಮಾಡುವ ಕಾರ್ಯ ನಮ್ಮಿಂದಲೇ ನಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಭೂ ಪ್ರದೇಶದಲ್ಲಿ ಬೀಳುವ ಮಳೆ ನೀರನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಕಾರ್ಯಾಗಾರ ಉದ್ಘಾಟಿಸಿ, ಬರಗಾಲ ಎಂದಾಕ್ಷಣ ದ.ಕ. ಜಿಲ್ಲೆಯವರು ಬಯಲು ಸೀಮೆಗಳಲ್ಲಿ ಬರಗಾಲ ಎಂದು ಹೇಳುತ್ತಿದ್ದ ಕಾಲ ಒಂದಿತ್ತು. ಈ ರೀತಿಯ ಸಮಸ್ಯೆ ದ.ಕ. ಜಿಲ್ಲೆಗೂ ಬರಬಾರದೆಂದರೆ ಎಲ್ಲರೂ ಜಲ ಸಂರಕ್ಷಣೆಯ ಕಾರ್ಯದ ಕಡೆ ಹೆಚ್ಚು ಗಮನ ಹರಿಸುವ ಪ್ರಮೇಯ ಉಂಟಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಮಾತನಾಡಿ, ದಕ ಜಿಲ್ಲೆಯಲ್ಲಿ ಹೆಚ್ಚು ಮಳೆ ಬಿದ್ದರೂ ಅವೆಲ್ಲವೂ ಜಲಾನಯನವನ್ನು ಸೇರಿ ಸಮುದ್ರ ಸೇರುತ್ತಿದೆ. ಆದರೆ ಮಳೆ ನೀರನ್ನು ಇಂಗಿಸುವ ಕೆಲಸವಾಗುತ್ತಿಲ್ಲ. ಇದಷ್ಟೇ ಅಲ್ಲದೆ ದಕ. ಜಿಲ್ಲೆಯಲ್ಲಿ ಕೃಷಿಗಾಗಿ ಭೂ/ ಅರಣ್ಯ ಪ್ರದೇಶ ಒತ್ತುವರಿಯಾಗುತ್ತಿದೆ. ಇದರಿಂದ ಪ್ರಕೃತಿ ಕಾಡಿನ ನಾಶ ಹೆಚ್ಚಾಗುತ್ತಿದೆ. ಹಾಗಾಗಿ ಮಳೆ ನೀರಿನ ಸಂರಕ್ಷಣೆ ಕ್ಷೀಣಿಸುತ್ತಿದೆ. ವಿಶೇಷವಾಗಿ ಜಿಲ್ಲೆಯ ಭೂಪ್ರದೇಶ ಹೆಚ್ಚಾಗಿ ಕೆಂಪು ಕಲ್ಲಿನಿಂದ ಆವೃತವಾಗಿರುವುದರಿಂದ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆ ಇದೆ. ಈ ನಿಟ್ಟಿನಲ್ಲಿ ನೀರನ್ನು ಇಂಗಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾತನಾಡಿ, ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ಇಂಗಿಸುವ ಕೆಲಸಕ್ಕೆ ಗಿಡ-ಮರಗಳನ್ನು ನೆಡುವುದು ಬಹು ಮುಖ್ಯ. ಮಳೆ ನೀರು ನೇರವಾಗಿ ಭೂಮಿಗೆ ಬೀಳುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ. ಇದನ್ನು ತಪ್ಪಿಸಲು ಜಲ ಸಂರಕ್ಷಣಾ ಕಾರ್ಯ ಅತಿ ಮುಖ್ಯ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಾಗಾರದಲ್ಲಿ ಮುಖ್ಯವಾಗಿ ಜಲ ಕ್ಷಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ತಿಳಿಸಲಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ರಾಸಾಯನಿಕ ತಜ್ಞರಾದ ವಿಜಯಲಕ್ಷ್ಮಿ ಮಾತನಾಡಿದರು. ಕಾರ್ಯಾಗಾರದಲ್ಲಿ ಪುತ್ತೂರು ಮತ್ತು ಕಡಬ ತಾಲೂಕು ಅನುಷ್ಟಾನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಅಂತರ್ಜಲ ಇಲಾಖೆಯ ಭೂ ವಿಜ್ಞಾನಿ ಸಿದ್ದೇಶ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು, ಜಿಲ್ಲಾ ಅಂತರ್ಜಲ ಇಲಾಖೆಯ ಸಿಬ್ಬಂದಿ ಪ್ರಸಾದ್ ವಂದಿಸಿದರು. ಪುತ್ತೂರು ತಾ.ಪಂ. ಐಇಸಿ ಸಂಯೋಜಕ ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top