ಕಾವು : ವಿಶ್ವಕರ್ಮ ಕಾವು ಕೂಡೂವಳಿಕೆ ವತಿಯಿಂದ ವಿಶ್ವಕರ್ಮ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಜನಮಂಗಲ ಸಭಾಭವನದಲ್ಲಿ ನಡೆಯಿತು.
ಹರೀಶ್ ಆಚಾರ್ಯ ಕಂಟ್ರಮಜಲು ಅವರ ಪೌರೋಹಿತ್ಯದಲ್ಲಿ ವಿಶ್ವಕರ್ಮ ಪೂಜಾ ವೈದಿಕ ವಿಧಿವಿಧಾನ ನಡೆಯಿತು.
ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಡುಕುತ್ಯಾರ್ ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ವೇ.ಮೂ.ಶ್ರೀ ಲೋಲಾಕ್ಷ ಶರ್ಮ ಧಾರ್ಮಿಕ ಉಪನ್ಯಾಸ ನೀಡಿ, ಶಿಲ್ಪಕಲೆ ಸೇರಿದಂತೆ ಪ್ರಮುಖ ಕುಲಕಸುಬುಗಳಿಗೆ ಹೆಚ್ಚು ಒತ್ತು ಕೊಡುವ ಭರದಲ್ಲಿ ನಮ್ಮ ವೈದಿಕ ಪರಂಪರೆ, ಬ್ರಾಹ್ಮಣತ್ವದ ಆಚರಣೆಯಲ್ಲಿ ಹಿಂದುಳಿದೆವು. ಮನೆ ಮಠ ಮಂದಿರಗಳ ಕೆತ್ತನೆ ಕೆಲಸಗಳನ್ನು ನಾವು ಅಚ್ಚುಕಟ್ಟಾಗಿ ಶಾಸ್ತ್ರೋಕ್ತವಾಗಿ ಮಾಡಿಕೊಟ್ಟು ಮುಂದಿನ ವೈದಿಕ ಆಚರಣೆಗಳನ್ನು ನಮಗೆ ಗೊತ್ತಿದ್ದರೂ ಅದನ್ನು ನಾವು ಪಾಲಿಸದೇ ಹೊರಗೆ ಉಳಿಯಬೇಕಾಯ್ತು. ಇಂದು ಮದುವೆ ಕಾರ್ಯಕ್ರಮದಲ್ಲಿ ಮಧುಮಕ್ಕಳಿಗೆ ಆರತಾಕ್ಷತೆ ಹಾಕಲು ಚಪ್ಪಲಿ ಹಾಕಿಕೊಂಡೇ ಮಂಟಪಕ್ಕೆ ಬರುತ್ತಿರುವುದು ನಮ್ಮ ಸಂಸ್ಕಾರ ಎಷ್ಟು ಕೆಳಮಟ್ಟಕ್ಕೆ ಬಂದಿದೆ ಎನ್ನುವುದು ಸೂಚಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆನೆಗುಂದಿ ಗುರುಸೇವಾ ಪರಿಷತ್ತು ಪುತ್ತೂರು ಮಂಡಲ ಅಧ್ಯಕ್ಷ ವಿ.ಪುರುಷೋತ್ತಮ ಆಚಾರ್ಯ ದೀಪ ಪ್ರಜ್ವಲಿಸಿ ಮಾತನಾಡಿ, ಎಲ್ಲಾ ಕೂಡೂವಳಿಕೆಗೂ ಮಾದರಿಯಾದ ಸಂಘಟನಾತ್ಮಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ನಗರ ಕೂಡೂವಳಿಕೆಯ ಮೊಕ್ತೇಸರ ಕೆ.ಕೃಷ್ಣ ಆಚಾರ್ಯ, ಕಾವು ಪೂಜಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಈಶ್ವರಮಂಗಲ, ಕಾವು ಕೂಡೂವಳಿಕೆ ಮೊಕ್ತೇಸರ ನಾರಾಯಣ ಆಚಾರ್ಯ, ಗೌರವಾಧ್ಯಕ್ಷ ಭಾಸ್ಕರ ಆಚಾರ್ಯ ಅರಿಯಡ್ಕ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ :
ಕಾರ್ಯಕ್ರಮದಲ್ಲಿ ಎಸ್ ಕೆ ಜಿ ಐ ನಿವೃತ್ತ ಶಾಖಾ ವ್ಯವಸ್ಥಾಪಕ ಎಸ್.ಎನ್.ಜಗದೀಶ್ ಆಚಾರ್ಯ ಮತ್ತು ಭಾರತೀಯ ಭೂ ಸೇನಾ ಮಾಜಿ ಯೋಧ ಕೆ. ಕೃಷ್ಣಯ್ಯ ಆಚಾರ್ಯ ಕಾಯರ್ತೋಡಿ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ನಾಲ್ಕು ವಿದ್ಯಾರ್ಥಿಗಳನ್ನೂ ಅಭಿನಂದಿಸಲಾಯಿತು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಮತ್ತು ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಾರಾಯಣ ಆಚಾರ್ಯ ಮಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಚನಾ ಪ್ರಾರ್ಥನೆ ಹಾಡಿದರು. ಪೂಜಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಆಚಾರ್ಯ ಕಂಟ್ರಮಜಲು ವಂದಿಸಿದರು. ಚಿದಾನಂದ ಆಚಾರ್ಯ ಕಾವು ಕಾರ್ಯಕ್ರಮ ನಿರ್ವಹಿಸಿದರು .