ನಂಬಿಕೆ ಎಂಬುದು ಕನ್ನಡಿಯಂತೆ. ಒಮ್ಮೆ ಕನ್ನಡಿ ಒಡೆದರೆ ಮತ್ತೆ ಕನ್ನಡಿಯನ್ನು ಸರಿ ಪಡಿಸಲು ಸಾಧ್ಯವಿಲ್ಲ. ನಂಬಿಕೆ ಕೂಡಾ ಹಾಗೆಯೇ. ಒಬ್ಬರ ಮೇಲೆ ಹುಟ್ಟಿ ಆ ನಂಬಿಕೆಯನ್ನು ಅವರೇ ಕೆಡಿಸಿದರೆ ಮತ್ತೆ ಅವರ ಮೇಲೆ ನಂಬಿಕೆ ಹುಟ್ಟಲು ಸಾಧ್ಯವಿಲ್ಲ. ನಂಬಿಕೆ ವ್ಯಕ್ತಿಯೊಬ್ಬನ ಮೇಲೆ ಇರಿಸುವ ಯೋಗ್ಯ ಭರವಸೆಯಾಗಿದೆ. ನಂಬಿಕೆ ಯಾರ ಮೇಲೆಯೂ ಸುಮ್ಮನೆ ಬರುವುದಲ್ಲ. ಬದಲಾಗಿ ಅವರ ನಡತೆಯಿಂದ ಹುಟ್ಟುವುದು .
ಆದರೆ ಈ ನಂಬಿಕೆಗೆ ಧಕ್ಕೆ ತರುವ ಕಾರ್ಯಗಳು ಕೆಲವೊಮ್ಮೆ ನಡೆಯುತ್ತದೆ. ಗೊತ್ತಾಗಿಯೂ ಗೊತ್ತಿಲ್ಲದೆಯೂ ನಡೆಯುತ್ತದೆ. ನಂಬಿಕೆ ದ್ರೋಹಿ ಎಂದು ತಿಳಿದಾಗ ಆ ವ್ಯಕ್ತಿಯ ಮೇಲಿನ ವಿಶ್ವಾಸ, ಆಸಕ್ತಿ, ಸ್ನೇಹ ಎಲ್ಲವೂ ಮುರಿದು ಬೀಳುತ್ತದೆ. ನಂಬಿದ ವ್ಯಕ್ತಿಯು ನಮ್ಮ ವಿಶ್ವಾಸಕ್ಕೆ ದಕ್ಕೆ ಉಂಟು ಮಾಡಿದಾಗ ಆಗುವಂತಹ ದುಃಖವು ಆಳವಾಗಿರುತ್ತದೆ. ಯಾವುದೇ ಔಷಧಿಗಳಿಂದಲೂ ವಾಸಿಯಾಗದ ಗಾಯವು ಮನಸಿಗಾಗಿರುತ್ತದೆ. ಒಮ್ಮೆ ಆ ವ್ಯಕ್ತಿಯ ಮೇಲೆ ನಂಬಿಕೆ ತಪ್ಪಿದ ಮೇಲೆ ಮತ್ತೆ ನಂಬಿಕೆ ಬರಬಹುದು ಆದರೆ ಹಿಂದಿನಷ್ಟು ಸಂಬಂಧ ದೃಢವಾಗಿರಲು ಸಾಧ್ಯವಿಲ್ಲ.
ನಮ್ಮನ್ನು ನಂಬಿದವರಿಗೆ ಯಾವತ್ತೂ ಮೋಸ ಮಾಡಬಾರದು. ಒಂದು ವೇಳೆ ನಮ್ಮ ವಿಶ್ವಾಸಕ್ಕೆ ಅರ್ಹರಾದವರು ಎರಡು ಮುಖದವರಾಗಿದ್ದರೆ ಅಂತವರಿಂದ ದೂರ ಉಳಿದುಬಿಡುವುದೇ ಉತ್ತಮ. ಅಂತವರ ಅಸಲಿ ಮುಖವಾಡದ ಸಮಯ ಕಳೆದಂತೆ ಉರುಳಿದಂತೆ ತಿಳಿಯುವುದು. ಈ ವಿಚಾರ ಮೊದಲೇ ಅರಿತಾಗ ಮನಸ್ಸಿಗೆ ಅಷ್ಟೊಂದು ಬೇಸರ ಮೂಡುವುದಿಲ್ಲ. ಆದರೆ ಈ ವಿಚಾರ ನಿಧಾನವಾಗಿ ತುಂಬಾ ಸಮಯ ದಾಟಿ ತಿಳಿಯುವಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಹಾಗಾಗಿ, ಯಾರ ನಂಬಿಕೆಯನ್ನೂ ಕೆಡಿಸಬೇಡಿ. ನಾವು ಮತ್ತೊಬ್ಬರ ಬಗ್ಗೆ ನಂಬುವ ಮೊದಲು ಒಂದೆರಡು ಬಾರಿ ಯೋಚಿಸಿದರೆ ಒಳ್ಳೆಯದು.
ನಂಬಿಕೆ ಎಂಬುದು ಆಟಿಕೆಯ ಗೊಂಬೆಯಲ್ಲ. ಅದು ಇಬ್ಬರ ನಡುವಿನ ಸಂಬಂಧ ಸುಗಮವಾಗಿ ನಡೆಯಲು, ಸುಖದಿಂದ ಸಾಗಲು ಇರುವ ಮಾರ್ಗವಾಗಿದೆ. ಒಂದು ಚಿಕ್ಕ ಲೋಪವೂ ಕೂಡಾ ಈ ದಾರಿಯಲ್ಲಿ ಅಪನಂಬಿಕೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಕಪಟ ಜಗತ್ತಿನಲ್ಲಿ ನಂಬುವ ಮುನ್ನ ಯೋಚಿಸಿ.
ಜಯಶ್ರೀ.
ಸಂಪ, ಪಂಜ