ರೌಡಿಶೀಟರ್ ಗಳನ್ನು ಮಟ್ಟ ಹಾಕುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕು : ಸಂಜೀವ ಮಠಂದೂರು| ಸಂಜೀವ ಮಠಂದೂರು ಅವರ ಮೇಲೆ ಮಾಡಿದ ಮಾನಹಾನಿ ಬಿಜೆಪಿಗೆ ಮಾಡಿದ ಮಾನಹಾನಿ | ಶಾಸಕರ ಪಿಸ್ತೂಲ್ ಆಟ ಇಲ್ಲಿ ನಡೆಯುವುದಿಲ್ಲ : ಹರಿಕೃಷ್ಣ ಬಂಟ್ವಾಳ

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಅವಹೇಳನಕಾರಿಯಾಗಿ ವರ್ತಿಸಿ, ಜೀವ ಬೆದರಿಕೆ ಒಡ್ಡಿದ ಪುತ್ತೂರು ಶಾಸಕ ಆಪ್ತ, ರೌಡಿಶೀಟರ್ ಪ್ರಜ್ವಲ್ ರೈ ಯನ್ನು ಐಪಿಎಸ್ ಸೆಕ್ಷನ್ ಅಡಿ ಕೇಸು ದಾಖಲಿಸಿ ಮತ್ತೆ ಗಡಿಪಾರು ಮಾಡಬೇಕು, ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿ ಪುತ್ತೂರು ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿ ಠಾಣಾಧಿಕಾರಿಗೆ ಶನಿವಾರ ಮನವಿ ನೀಡಲಾಯಿತು.

ಮೊದಲಿಗೆ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಬಳಿಕ ಮೆರವಣಿಗೆ ಮೂಲಕ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರ ಠಾಣೆಗೆ ಬಂದು ಮನವಿ ಸಲ್ಲಿಸಿದರು.

ಠಾಣಾಧಿಕಾರಿಗೆ ಮನವಿ ನೀಡಿ ಮಾಜಿ ಶಾಸಕ ಸಂಜೀವ ಮಠಂದೂರು  ಮಾತನಾಡಿ, ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ ವಿಚಾರವನ್ನು ಮುಂದಿಟ್ಟುಕೊಂಡು ರೌಡಿಶೀಟರ್ ಪ್ರಜ್ವಲ್ ಎಂಬಾತ ತನ್ನ ವಿರುದ್ಧ  ಕೋಟಿ ಚೆನ್ನಯ ಕಂಬಳ ಸಮಿತಿ ವಾಟ್ಸಪ್ ಗ್ರೂಪ್‍ ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವುದು ಖಂಡನೀಯ. ನನ್ನಂತಹ ಅದೂ ಮಾಜಿ ಶಾಸಕರ ಮೇಲೆಯೇ ಈ ರೀತಿಯ ಗೂಂಡಾಗಿರಿ ತೋರಿಸುತ್ತಿರುವಾಗ ಸಾಮಾನ್ಯ ಕಾರ್ಯಕರ್ತರು, ಮುಖಂಡರು ಸಾರ್ವಜನಿಕವಾಗಿ ಹೇಗೆ ಕೆಲಸ ಮಾಡಬೇಕು. ತಕ್ಷಣ ಆರೋಪಿ ಹಾಗೂ ಕುಮ್ಮಕ್ಕು ನೀಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಮಾಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಬಾರದು ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.



































 
 

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟ ಶಬ್ದಗಳಲ್ಲಿ ಮಾನಹಾನಿ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಪ್ರತಿಭಟನೆಗೆ ಇಳಿದಿಲ್ಲ. ಯಾಕೆಂದರೆ ಭಾರತೀಯ ಜನತಾ ಪಾರ್ಟಿ ಪರಂಪರೆ, ಸಂಸ್ಕೃತಿ ಆಧಾರದಲ್ಲಿ ಬೆಳದು ಬಂದಿದೆ ಎಂಬ ಕಾರಣಕ್ಕೆ. ಸಂಜೀವ ಮಠಂದೂರು ಅವರ ಮೇಲೆ ಮಾಡಿದ ಮಾನಹಾನಿ ವೈಯಕ್ತಿಕ ಮಾನಹಾನಿ ಅಲ್ಲ. ಇದು ಭಾರತೀಯ ಜನತಾಪಾರ್ಟಿಗೆ ಮಾಡಿದ ಮಾನಹಾನಿ. ರೌಡಿಶೀಟರ್ ಪ್ರಜ್ವಲ್ ನಂತವರು ಮಾಡಿದ ಮಾನಹಾನಿಯನ್ನು ಬಿಜೆಪಿಗೆ ಎದುರಿಸುವುದು ದೊಡ್ಡ ಸಂಗತಿಯೇ ಅಲ್ಲ. ಕಾಂಗ್ರೆಸ್ ಅನ್ನು ಧೂಳಿಪಟ ಮಾಡುವ ಸಾಮರ್ಥ್ಯ ಬಿಜೆಪಿಗೆ ಇದೆ ಎಂದ ಅವರು, ಪ್ರಜ್ವಲ್ ರೈಯನ್ನು ಮತ್ತೆ ಗಡಿಪಾರು ಮಾಡಬೇಕು. ಆತನ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು. ಐಪಿಎಸ್‍ ಸೆಕ್ಷನ್ ನಡಿ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರಕಾರ ಬಂದ ಮೇಲೆ ರಾಜ್ಯದಲ್ಲಿ ಹಲವಾರು ಹತ್ಯೆಗಳಾಗುತ್ತಿವೆ. ಕಾನೂನು ವ್ಯವಸ್ಥೆ ಮೀರಿ ಗೂಂಡಾಗಿರಿ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂದು ಆರೋಪಿಸಿದ ಅವರು, ರೌಡಿಸಮ್‍ ಗೆ ಸೀಮಿತವಾದ ಪ್ರದೇಶ ಪುತ್ತೂರಲ್ಲ ಎಂಬುದನ್ನು ಶಾಸಕರು ತಿಳಿದುಕೊಳ್ಳಬೇಕು. ಇಂತಹಾ ರೌಡಿಸಮ್‍ ಇಂದಿನಿಂದ ಬಂದ್ ಆಗಬೇಕು. ಒಂದು ಕಾಲದಲ್ಲಿ ಶಾಸಕರು ಪಿಸ್ತೂಲ್ ಹಿಡಿದು ರೌಡಿಸಮ್ ಮಾಡಿದ್ದು, ಗೊತ್ತು. ಅವರ ಪಿಸ್ತೂಲ್ ಆಟ ಇಲ್ಲಿ ನಡೆಯುವುದಿಲ್ಲ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿದರೆ ನಿಮ್ಮನ್ನು ಬಿಡುವುದಿಲ್ಲ ನಮ್ಮನ್ನು ಮುಟ್ಟಲು ಬರಬೇಡಿ. ನಿಮಗೆ ತಾಕತ್ತಿದ್ದರೆ ರಾಜಕೀಯವಾಗಿ ಎದುರಿಸಿ, ರಾಜಕೀಯ ಹೇಳಿಕೆಗಳ ಮೂಲಕ ಎದುರಿಸಿ. ಅದಕ್ಕೆ ತಕ್ಕ ಉತ್ತರ ಕೊಡಲು ಬಿಜೆಪಿ ಸಿದ್ಧವಿದೆ. ಅದನ್ನು ಬಿಟ್ಟು ಗೂಂಡಾಗಿರಿ ಹೇಳಿಕೆ ನೀಡಿದರೆ ಬಿಡುವ ಪ್ರಶ್ನೆಯೇ ಇಲ್ಲ. ನಿಮಗೆ ಗಂಡಸ್ತನ ಇದ್ದರೆ ತತ್ವ ಸಿದ್ಧಾಂತದಡಿ ಕೆಲಸ ಮಾಡಿ ಎಂದು ಹೇಳಿದ ಅವರು, ಪೊಲೀಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಜೂ.6 ಕ್ಕೆ ನೀತಿ ಸಂಹಿತೆ ಮುಗಿಯುತ್ತದೆ. ಜೂ.7 ತಾರೀಕಿಗೆ ಮತ್ತೆ ನಮ್ಮ ಆಟ ಆರಂಭಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ರಾಧಾಕೃಷ್ಣ ಬೋರ್ಕರ್, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top