ಪುತ್ತೂರು: ವಿದ್ಯಾರ್ಥಿಗಳು ಉತ್ಸಾಹದ ಚಿಲುಮೆಗಳಾಗಿರಬೇಕು. ದೇಶವನ್ನು ಮುಂದುವರಿಸುವ ಜವಾಬ್ದಾರಿ ವಿದ್ಯಾರ್ಥಿಗಳದ್ದು. ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಹಾಗೂ ನೈತಿಕತೆ ಇರಬೇಕು. ಯಶಸ್ಸು ಒಂದು ದಿನದಲ್ಲಿ ಬರುವಂತಹದ್ದಲ್ಲ. ಹಂತ ಹಂತವಾಗಿ ತಾಳ್ಮೆಯಿಂದ ಮುನ್ನಡೆದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಅತಿ ವಂ. ಆ್ಯಂಟನಿ ಮೈಕೆಲ್ ಶೆರಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕೆಂದಿದ್ದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ, ತಮ್ಮ ಕುಟುಂಬ ಹಾಗೂ ಸಮಾಜದ ಜನರ ಮೇಲೆ ಮತ್ತು ದೇವರ ಮೇಲೆ ನಂಬಿಕೆ ಇರಬೇಕು. ಪ್ರತಿಯೋರ್ವರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದು ಕಾರಂಜಿಯಂತೆ ಹೊರಬರಲು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ವಂ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಪ್ರಮುಖ ಹೆಜ್ಜೆಗುರುತುಗಳ ಬಗ್ಗೆ, ಕಾಲೇಜಿನಲ್ಲಿ ಆಯೋಜಿಸಿದ ಕಾರ್ಯಕ್ರಮಗಳ ಬಗ್ಗೆ ಹಾಗೂ ಶೈಕ್ಷಣಿಕ ಮತ್ತು ಪಠ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಸಮಗ್ರ ವರದಿ ನೀಡಿದರು.
ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇನಸ್ ರವರು ಮಾತನಾಡಿ “ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜೀವನದಲ್ಲಿ ಪ್ರತಿ ದಿನವನ್ನೂ ಸಂತಸದಿಂದ ಕಳೆಯಬೇಕು ಆದರೆ ಜೀವನ ಮೌಲ್ಯಗಳ ಬಗ್ಗೆ ಗಮನ ಹರಿಸಬೇಕು
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನ ಮಹತ್ವದ ಮೈಲಿಗಲ್ಲು ಗುಣಮಟ್ಟ ನಿರ್ವಹಣೆಗಾಗಿ ಸಂಸ್ಥೆಗೆ ದೊರೆತ ಐಎಸ್ಒ 9001:2015 ಪ್ರಮಾಣೀಕರಣ. ಐಎಸ್ಒ 9001:2015 ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಗಣಕ ವಿಜ್ಞಾನ ವಿಭಾಗದ ಡೀನ್ ವಿನಯಚಂದ್ರ ಐಎಸ್ಒ 9001:2015 ಪ್ರಮಾಣೀಕರಣದ ಮಹತ್ವವನ್ನು ತಿಳಿಸಿದರು.
ಮೂರು ದಶಕಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ| ಸುಬೈರ್, ಕಾಲೇಜಿನ ಉಪಪ್ರಾಂಶುಪಾಲ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ ಪಿ ರಾಧಾಕೃಷ್ಣ, ಕಾಲೇಜಿನ ಉಪಪ್ರಾಂಶುಪಾಲ, ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಗಣೇಶ್ ಭಟ್ ಕೆ, ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ| ನಾಗರಾಜು ಎಂ. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾನವಿಕ ವಿಭಾಗದ ಡೀನ್ ನಾರ್ಬರ್ಟ್ ಮಸ್ಕರೇನಸ್, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಚಂದ್ರಶೇಖರ್ ಕೆ., ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ತನುಜಾ, ಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಶ್ರೀರಕ್ಷಾ ಬಿ. ವಿ. ಸನ್ಮಾನ ಭಾಷಣ ಮಾಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದ ಡಾ| ಎಲಿಯಾಸ್ ಪಿಂಟೋ ಎನ್ ಇ ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕರಾದ ಹರ್ಷಿತ್ ಆರ್ ಹಾಗೂ ಲೆಫ್ಟಿನೆಂಟ್ ಪದವಿಯಿಂದ ಕ್ಯಾಪ್ಟನ್ ಪದವಿಗೆ ಭಡ್ತಿ ಪಡೆದ ಕಾಲೇಜಿನ ಎನ್ ಸಿ ಸಿ ಅಧಿಕಾರಿ ಜಾನ್ಸನ್ ಡೇವಿಡ್ ಸಿಕ್ವೇರಾ ಹಾಗೂ ಕ್ಯಾಂಪಸ್ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕೆನಡಾ ವಿಂಡ್ಸರ್ನಲ್ಲಿ ನಡೆದ ಕಾಮನ್ ವೆಲ್ತ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಜೀವ ರಕ್ಷಣಾ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ, ಶ್ರೀಲಂಕಾದ ಆಡಮ್ಸ್ ಬ್ರಿಡ್ಜ್ ರಾಮ ಸೇತುವಿನಲ್ಲಿ ನಡೆದ ಅಂತರಾಷ್ಟ್ರೀಯ 35 ಕಿಲೋಮೀಟರ್ ಕಯಾಕಿಂಗ್ ಈವೆಂಟ್ ನಲ್ಲಿ ಭಾಗವಹಿಸಿದ ಹಾಗೂ ವಿವಿಧ ಈಜು ಸ್ಪರ್ಧೆಗಳಲ್ಲಿ ಪದಕ ವಿಜೇತರಾದ ತೃತೀಯ ಬಿ ಎ ವಿದ್ಯಾರ್ಥಿ ತ್ರಿಶೂಲ್, ವೇಟ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪದಕ ವಿಜೇತರಾದ ಪ್ರಥಮ ಬಿಎಸ್ಸಿ ಯ ಸ್ಪಂದನಾ, ಅಂತಿಮ ಬಿಕಾಂನ ಅಭಿರಾಮಚಂದ್ರ, ಪ್ರಥಮ ಎಂಕಾಂ ನ ಬ್ಯೂಲ ಪಿಟಿ, ಮತ್ತು ಹ್ಯಾಮರ್ ಎಸೆತದಲ್ಲಿ ಪದಕ ವಿಜೇತರಾದ ಪ್ರಥಮ ಬಿಸಿಎಯ ವರ್ಷಾ ಅವರುಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ| ಎಲಿಯಾಸ್ ಪಿಂಟೋರವರು ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.
ಆಲ್ ಇಂಡಿಯಾ ತಲ್ ಸೈನಿಕ್ ಕ್ಯಾಂಪ್ ನಲ್ಲಿ ಭಾಗವಹಿಸಿದ ಕಾಲೇಜಿನ ಹೆಮ್ಮೆಯ ಎನ್ ಸಿ ಸಿ ಕೆಡೆಟ್ ಗಳಾದ ಎಸ್ ಸಿ ಯು ಒ ಸುಜಿತ್ ಎಸ್ ಪಿ, ಜೆಯುಒ ರಿಯಾ ಸುಶ್ಮಿತಾ ಡಿಸೋಜ ಹಾಗೂ ಮೇರಿ ಮಾಠಿ ಮೇರಾ ದೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಡೆಟ್ ಸುದರ್ಶನ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಎನ್ ಸಿ ಸಿ ಆಫೀಸರ್ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾರವರು ಸನ್ಮಾನ ಭಾಷಣ ಮಾಡಿದರು.
ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ಅಶೋಕ್ ರಾಯನ್ ಕ್ರಾಸ್ತಾ, ಮಾಯ್ ದೆ ದೇವವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಯತೀಂದ್ರನಾಥ ರೈ ಪಿ ಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ. ಜಗಜೀವನ್ ದಾಸ್ ರೈ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಪಿನ್ ಹೆಚ್ ಜಿ, ಕಾರ್ಯದರ್ಶಿ ಕೆ ಸಮೃದ್ಧಿ ಶೆಣೈ, ಜತೆ ಕಾರ್ಯದರ್ಶಿ ರಕ್ಷಾ ಪಿ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೃಷಿತಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಉಪ-ಪ್ರಾಂಶುಪಾಲ ಡಾ. ಪಿ ಎಸ್ ಕೃಷ್ಣ ಕುಮಾರ್ ಸ್ವಾಗತಿಸಿದರು. ಉಪ-ಪ್ರಾಂಶುಪಾಲ ಡಾ| ವಿಜಯ ಕುಮಾರ್ ಎಂ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು.