ನೆಲ್ಯಾಡಿ : ಕೆಲ ದಿನದ ಹಿಂದೆ ತೆಂಗಿನಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೆಲ್ಯಾಡಿ ಗ್ರಾಮದ ತೋಟ ನಿವಾಸಿ ಧನಂಜಯ ಗೌಡ (43) ಅವರು ಮೇ 16ರಂದು ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಧನಂಜಯ ಗೌಡ ಅವರು ಮೇ.11ರಂದು ನೆರೆಮನೆಯ ಚಂದ್ರ ಬಿರುವಳಿಕೆ ಎಂಬವರ ಮನೆಗೆ ಕೃಷಿ ಕೆಲಸಕ್ಕೆ ಹೋಗಿದ್ದು ಅಲ್ಲಿ ಸಂಜೆ 6 ಗಂಟೆ ವೇಳೆಗೆ ತೆಂಗಿನ ಮರದಿಂದ ಕಾಯಿ ಕೀಳುತ್ತಿರುವಾಗ ಆಕಸ್ಮಿಕವಾಗಿ ಕೈ ಜಾರಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಕರೆದೊಯ್ದು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಇದ್ದಾಗ ವೈದ್ಯರ ಸಲಹೆಯಂತೆ ಮೇ.14ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆನ್ಲಾಕ್ ನಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ಮೇ.16ರಂದು ಸಂಜೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಚಿತ್ರಕಲಾ, ಪುತ್ರಿ ಜನನಿ, ಸಹೋದರ ಗಿರಿಯಪ್ಪ ಗೌಡ ಹಾಗೂ ಸಹೋದರಿಯರನ್ನು ಅಗಲಿದ್ದಾರೆ. ಮೃತ ಧನಂಜಯ ಅವರು ಕೃಷಿಕರೂ ಆಗಿದ್ದು ಆಲಂಕಾರು ಬುಡೇರಿಯಾ ಕ್ರಾಸ್ ಬಳಿ ಈರೋಲ್ ಮಾರಾಟ ಮಾಡುವ ಮೂಲಕ ಚಿರಪರಿಚಿತರಾಗಿದ್ದರು. ಮೃತರ ಪತ್ನಿ ಚಿತ್ರಕಲಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.