ಪುತ್ತೂರು: ಕಾಲೇಜು ವಿದ್ಯಾರ್ಥಿನಿಯರ, ಮಹಿಳೆಯರ ಕಗ್ಗೊಲೆ, ಹಿಂದೂಗಳ ದಮನ ನೀತಿ ರಾಜ್ಯ ಸರಕಾರದ ಒಂದು ವರ್ಷದ ಸಾಧನೆಯಾಗಿದ್ದು, ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಂದು ವರ್ಷದಲ್ಲಿ ಒಂದೇ ಒಂದು ಶೌಚಾಲಯ ಕಟ್ಟಲು, ಅಂಗಡಿವಾಡಿಗಳಿಗೆ ಅನುದಾನ ಬಿಡಿ ದುರಸ್ತಿ ಕಾರ್ಯವನ್ನೂ ಮಾಡಲು ಆಗದ ಸರಕಾರಕ್ಕೆ ಇಚ್ಛಾಶಕ್ತಿಯ ಕೊರೆತ ಎದ್ದು ಕಾಣುತ್ತಿದೆ ಎಂದು ಹೇಳಿದ ಅವರು, ದಿನಗೂಲಿ ನೌಕರರಿಗೆ, ಬಿಸಿಯೂಟ ಅಡುಗೆಯವರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, 108 ಆ್ಯಂಬುಲೆನ್ಸ್ ಚಾಲಕರಿಗೆ ವೇತನ ನೀಡಲು ರಾಜ್ಯ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಪಾಕಿಸ್ತಾನದ ಆರ್ಥಿಕ ಸ್ಥಿತಿಯ ಮಟ್ಟವನ್ನು ಕರ್ನಾಟಕ ಸರಕಾರಕ್ಕೆ ತಂದಿಟ್ಟಿದೆ ಎಂದು ಆರೋಪಿಸಿದರು.
ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಕಳೆದ 7 ತಿಂಗಳುಗಳಿಂದ ಸಹಾಯಧನ ನೀಡಿಲ್ಲ. ಕೇಂದ್ರ ಸರಕಾರದಿಂದ ನೀಡಲಾಗುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದೆ. ಕೇಂದ್ರ ಸರಕಾರ ಈಗಾಗಲೇ ಘೋಷಿಸಿದ ಪರಿಹಾರ ನಿಧಿಯನ್ನು ರೈತರ ಸಾಲಮನ್ನಕ್ಕೆ ವಜಾ ಮಾಡಲು ಹೊರಟಿದೆ. ಈಗಾಗಲೇ ರೈತರಿಗೆ ನೀಡುವ 5 ಲಕ್ಷ ಸಾಲವನ್ನು 15 ಲಕ್ಷಕ್ಕೆ ಏರಿಸುವ ಘೋಷಣೆಯನ್ನು ಸರಕಾರ ಕಳೆದ ಸಪ್ಟೆಂಬರ್ ನಲ್ಲಿ ಮಾಡಿದ್ದು, 9 ತಿಂಗಳು ಕಳೆದರೂ ಜ್ಯಾರಿಯಾಗಿಲ್ಲ. ಇದು ರಾಜ್ಯ ಸರಕಾರ ಘೋಷಣೆ ಮಾಡಿದ ಬಜೆಟ್ ಎಷ್ಟು ಜ್ಯಾರಿಯಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ತಿಳಿಸಿದ ಅವರು, ಪುತ್ತೂರು ನಗರದಲ್ಲಿ ಜ್ವಲಂತ ಸಮಸ್ಯೆಗಳಿದ್ದು, ಕುಡಿಯುವ ನೀರಿನ ಜಲಸಿರಿ ಯೋಜನೆ, ಚರಂಡಿ ಹೂಳೆತ್ತುವಿಕೆ, ಮರಗಳ ಗೆಲ್ಲು ಕಡಿಯುವಿಕೆ ಹೀಗೆ ಹತ್ತು ಹಲವಾರು ಮಳೆಗಾಲ ಪೂರ್ವ ಕಾಮಗಾರಿಗಳು ನೆನೆಗುದಿಗೆ ಬಿದ್ದು, ಅಧಿಕಾರಿಗಳು ಶಾಸಕರ ಸೂಚನೆಯನ್ನು ಕ್ಯಾರೇ ಅನ್ನುತ್ತಿಲ್ಲ ಎಂಬ ಪರಿಸ್ಥಿತಿಗೆ ಉಂಟಾಗಿದೆ ಎಂದು ಹೇಳಿದರು. ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯಾಗಲಿ ಸ್ಥಳೀಯಾಡಳಿತ ಸಂಸ್ಥೆ ಕುರಿತು ಸರಕಾರ ಕಡೆಗಣನೆ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಹಿಂದೂ, ರೈತ ವಿರೋಧಿ ನೀತಿ ಅನುಸರಿಸಿ ಅಭಿವೃದ್ಧಿ ಶೂನ್ಯ ಆಡಳಿತ ನೀಡಿದೆ ಎಂದು ಹೇಳಿದರು.
ಪುತ್ತೂರು ಶಾಸಕರು ಒಂದು ವರ್ಷದ ಸಾಧನೆಯನ್ನು ಹಿರಿಯ ಬಿಜೆಪಿ ಮುಖಂಡರ ಬಳಿ ತೆರಳಿ ಹೇಳುತ್ತಿರುವುದು, ಮಾತೃ ಪಕ್ಷದ ಮೇಲೆ ಒಲವು ಇದ್ದಂತೆ ತೋರುತ್ತಿದೆ ಪುತ್ತೂರು ಶಾಸಕರು ಘರ್ ವಾಪ್ಸಿ ಆಗುವ ಲಕ್ಷಣ ತೋರುತ್ತಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮುಖಂಡರಾದ ನಿತೀಶ್ ಕುಮಾರ್ ಶಾಂತಿವನ, ಪ್ರಸನ್ನ ಮಾರ್ತ, ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.