ಪುತ್ತೂರು : ಪುತ್ತೂರಿನಲ್ಲಿ ಈಗಾಗಲೇ ನಿಗದಿಯಾದ ಬನ್ನೂರಿನ ಜಮೀನಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರ ಪ್ರಕ್ರಿಯೆ ಆರಂಭಿಸುವಂತೆ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ ಜಾಥಾ ಸೋಮವಾರ ದರ್ಬೆ ವೃತ್ತದಿಂದ ಬೊಳುವಾರು ತನಕ ನಡೆಯಿತು.
ಜನ ಬೆಂಬಲಕ್ಕಾಗಿ ನಮ್ಮ ನಡಿಗೆ ಘೋಷ ವಾಕ್ಯದೊಂದಿಹೆ ನಡೆದ ಜಾಥಾವನ್ನುದ್ದೇಶಿಸಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಸಾಮಾನ್ಯ ಜನರಿಗೂ ಉಪಯೋಗವಾಗುವ ನಿಟ್ಟಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಶೀಘ್ರ ಸ್ಥಾಪನೆಯಾಗಬೇಕು. ಕಾಲೇಜಿಗೆ ಪೂರಕವಾದ ಸರಕಾರಿ ಆಸ್ಪತ್ರೆಯೂ 300 ಬೆಡ್ ಆಗಿ ಅಭಿವೃದ್ಧಿಗೊಳ್ಳಬೇಕು. ಎಲ್ಲಾ ಜನರ ಆಶಯದಂತೆ ಈ ಹೋರಾಟವನ್ನು ನಾವು ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಮಿತಿ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ, ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ, ಉಪಾಧ್ಯಕ್ಷ ಝೇವಿಯರ್ ಡಿ;ಸೋಜಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೌರಿಸ್ ಮಸ್ಕರೇನಸ್, ಬಾಲಕೃಷ್ಣ ಗೌಡ ಕೆಮ್ಮಾರ, ಅಮಲ ರಾಮಚಂದ್ರ, ರಾಜ್ಯ ದಾರಿ ಮೀಸ್ ಒಕ್ಕೂಟದ ಅಧ್ಯಕ್ಷ ಎಸ್.ಬಿ.ದಾರಿಮಿ, ವರ್ತಕ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ, ಕಾರ್ಯದರ್ಶಿ ಉಲ್ಲಾಸ್ ಪೈ, ಸುಭಾಶ್, ಜಯಂತಿ ಬಲ್ನಾಡು ಮತ್ತಿತರರು ಪಾಲ್ಗೊಂಡಿದ್ದರು.