ಪುತ್ತೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಬಂದು ಸಭೆ ನಿಲ್ಲಿಸಿದ ಘಟನೆ ಇಂದು ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಜಲಸಿರಿ ಅಧಿಕಾರಿಗಳು ಹಾಗೂ ಪಂಪ್ ಆಪರೇಟರ್ ಗಳನ್ನು ಕರೆಸಿ ಶಾಸಕರ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿದ್ದರು.
ಸಭೆ ಆರಂಭಗೊಂಡು ಜಲಸಿರಿ ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆಯಲ್ಲಿರುವ ಸಮಸ್ಯೆಗಳನ್ನು ಸಭೆಯಲ್ಲಿ ವಿವರಿಸುತ್ತಿದ್ದಂತೆ ತಹಶೀಲ್ದಾರ್ ಕುಂಞಿ ಅಹಮ್ಮದ್ ಹಾಗೂ ಇಲೆಕ್ಷನ್ ಕಮಿಷನ್ ಗೆ ಸಂಬಂಧಿಸಿದ ಅಧಿಕಾರಿಗಳು ದಿಢೀರನೇ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಭೆ ನಡೆಸುವುದು ಕಾನೂನಿಗೆ ವಿರುದ್ಧ. ಸಭೆಯನ್ನು ತಕ್ಷಣ ನಿಲ್ಲಿಸುವಂತೆ ಶಾಸಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು ವಿಧಾನಸಭಾ ಕ್ಷೇತ್ರದ ಕೆಲವೆಡೆ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಸಮಸ್ಯೆ ಪರಿಹರಿಸಲು ಸಭೆ ಕರೆದಿದ್ದೇವೆ. ಸಭೆಯನ್ನು ನಿಲ್ಲಿಸುತ್ತೇವೆ. ಆದರೆ ಮುಂದಿನ ಎರಡು ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕುರಿತು ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.