ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಕೃಷಿ ಅಭಿವೃದ್ಧಿ ಸಂಘ (scads)ದ ಆಡಳಿತ ಮಂಡಳಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಾಮನಿರ್ದೇಶಿತ ಸದಸ್ಯರಾಗಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಆಡಳಿತ ಮಂಡಳಿ ನೇಮಕ ಮಾಡಿದೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿ ಮಾ.25ರಂದು ಕೈಗೊಂಡ ನಿರ್ಣಯದಂತೆ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸ್ಕ್ಯಾಡ್ಸ್ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಲಾಗಿದೆ.
2019 ಮೇ. 20 ರಂದು ನೇಮಕವಾಗಿದ್ದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ವಿನಯ ಕುಮಾರ್ ಸೂರಿಂಜೆಯವರ ನಾಮ ನಿರ್ದೇಶನವನ್ನು ಹಿಂತೆಗೆದುಕೊಂಡು ಇದೀಗ ಶಶಿಕುಮಾರ್ ರೈ ಬಾಲ್ಯೊಟ್ಟುರವರನ್ನು ನೇಮಕ ಮಾಡಲಾಗಿದೆ.
ಇರ್ದೆ ಗ್ರಾಮದ ಬಾಲ್ಯೊಟ್ಟು ನಿವಾಸಿಯಾದ ಶಶಿಕುಮಾರ್ ರೈ ಅವರು ಪ್ರಗತಿಪರ ಕೃಷಿಕರಾಗಿ, ಸಹಕಾರಿ ರಂಗದ ಧುರೀಣರಾಗಿ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, 8 ವರ್ಷ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆಯ ಸಂಚಾಲಕರಾಗಿ, ಬೆಂದೃತೀರ್ಥ ಅಭಿವೃದ್ಧಿ ಸಮಿತಿ ಸಂಚಾಲಕರಾಗಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೋಕ್ತೇಸರರಾಗಿ, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಾಲಯ ಹಾಗೂ ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ, ಇರ್ದೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ, ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಂಚಾಲಕರಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಕೋಶಾಧಿಕಾರಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ, ಟಿ.ಎ.ಪಿ.ಎಂ.ಎಸ್. ನಿರ್ದೇಶಕರಾಗಿ ಆರ್ಲಪದವು ಪೀಮಾಣಿ ಕಿನ್ನಿಮಾಣಿ ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸತತ ಮೂರನೇ ಬಾರಿಗೆ ಇವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.