ಪುತ್ತೂರು: ಒಳಮೊಗ್ರು ಗ್ರಾಮದ ರಾಜಮಾಡದಲ್ಲಿ ಜ. 30, 31ರಂದು ನಡೆಯಲಿರುವ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರದ ದೈವಗಳ ನೇಮೋತ್ಸವಕ್ಕೆ ಭಾನುವಾರ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಹಾಗೂ ಪರಿವಾರ ದೈವಗಳ ಕೀರ್ವಾಳು ಭಂಡಾರ ತೆರಳಿತು.
ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ, ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವ ಕಾರ್ಯಕ್ರಮ ನಡೆಯಿತು. ಸಂಜೆ ಕೈಕಾರ ಕಿನ್ನಿಮಾಣಿ ದೈವಸ್ಥಾನದಿಂದ ಕಿನ್ನಿಮಾಣಿ ಮತ್ತು ಪರಿವಾರ ದೈವಗಳ ಕೀರ್ವಾಳು ಭಂಡಾರ ಇಳಿಸಿ ಹೊಸಮಾರು ಕಟ್ಟೆಗೆ ತರಲಾಯಿತು. ಇದೇ ಸಂದರ್ಭ ಮುಗೇರು ಕದಿಕೆ ಚಾವಡಿಯಿಂದ ಶ್ರೀ ಪೂಮಾಣಿ ದೈವ ಹಾಗೂ ಪಿಲಿಭೂತ, ಮಲರಾಯ ದೈವಗಳ ಕೀರ್ವಾಳು ಭಂಡಾರ ಿಳಿಸಿ, ಹೊಸಮಾರಿನಿಂದ ಕಿನ್ನಿಮಾಣಿ ಭಂಡಾರದೊಂದಿಗೆ ಸೇರಿ ಬೊಳ್ಳಾಡಿ ರಾಜಮಾಡದಲ್ಲಿ ಏರಿಸಲಾಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ಜ. 30, 31, ಫೆ. 1, 2ರಂದು ನೇಮೋತ್ಸವ:
ಜ. 30ರಂದು ಬೆಳಿಗ್ಗೆ 9ಕ್ಕೆ ಶ್ರೀ ಕಿನ್ನಿಮಾಣಿ ದೈವದ ನೇಮ, ಮಧ್ಯಾಹ್ನ 3ಕ್ಕೆ ಶ್ರೀ ಪೂಮಾಣಿ ದೈವದ ನೇಮ ನಡೆಯಲಿದೆ. ರಾತ್ರಿ 9ಕ್ಕೆ ಸುಡುಮದ್ದು ಸೇವೆ ನಡೆದು, ಮಲರಾಯ ದೈವದ ನೇಮ, ವರ್ಣರ ಪಂಜುರ್ಲಿ ನೇಮ ನಡೆಯಲಿದೆ.
ಜ. 31ರಂದು ಬೆಳಿಗ್ಗೆ 9ಕ್ಕೆ ಶ್ರೀ ಪಿಲಿಭೂತ ದೈವದ ನೇಮ, ಮಧ್ಯಾಹ್ನ 1.30ಕ್ಕೆ ಗುಳಿಗ ದೈವದ ನೇಮ ನಡೆದು, ಸಂಜೆ 4ಕ್ಕೆ ದೈವಗಳ ಭಂಡಾರವನ್ನು ರಾಜಮಾಡದಿಂದ ಇಳಿಸಿ, ಮುಗೇರು ಕದಿಕೆ ಚಾವಡಿ ಹಾಗೂ ಕೈಕಾರ ದೈವಸ್ಥಾನದಲ್ಲಿ ಏರಿಸಲಾಗುವುದು. ಫೆ. 1ರಂದು ಬೆಳಿಗ್ಗೆ 9ಕ್ಕೆ ಉರ್ವದಲ್ಲಿ ಗಣಪತಿ ಹೋಮ, ತಂಬಿಲ, ಸಂಜೆ ದುರ್ಗಾಪೂಜೆ, ಧೂಮಾವತಿ ಹಾಗೂ ಪರಿವಾರ ದೈವಗಳ ಭಂಡಾರ ಿಳಿಸಿ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 10.30ಕ್ಕೆ ಪಂಜುರ್ಲಿ ದೈವದ ನೇಮ ನಡೆದು, ಫೆ. 2ರಂದು ಬೆಳಿಗ್ಗೆ 7ಕ್ಕೆ ಧೂಮಾವತಿ ದೈವದ ನೇಮ, ಗುಳಿಗ ದೈವದ ನೇಮ, ಫೆ. 3ರಂದು ಬೆಳಿಗ್ಗೆ ಮುಗೇರು ಕಾಯರ್ ಮಜಲಿನಲ್ಲಿ ಇಷ್ಟದೇವತೆ, ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ.