ಕೊಪ್ಪಳ : ಕನ್ನಡ ಸರಿಯಾಗಿ ಓದಲು ಮತ್ತು ಬರೆಯಲು ಬಾರದಿದ್ದರೂ ಒಬ್ಬ 625ರಲ್ಲಿ 622 ಅಂಕ ಪಡೆದಿದ್ದ. ಅಂಕಗಳ ಆಧಾರದಲ್ಲಿ ನ್ಯಾಯಾಲಯದ ಜವಾನ ಹುದ್ದೆಗೆ ಆಯ್ಕೆಯಾಗಿದ್ದ.ಈ ಬಗ್ಗೆ ಆತನ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಕೊಪ್ಪಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ. ಎಂ ಹರೀಶ್ ಕುಮಾರ್ ರವರ ದಿಟ್ಟತನದ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಆಯ್ಕೆ ಆಗಿದ್ದ ಲಕ್ಷ್ಮಿಕಾಂತ್ ಲೋಕರೆ ಎಂಬವರ ಪುತ್ರ ಪ್ರಭು ಎಂಬವರು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆಯದೆ ಅಕ್ರಮವಾಗಿ ಮತ್ತು ಮೋಸದಿಂದ 625 ಕ್ಕೆ 622 ಅಂಕದೊಂದಿಗೆ ರ್ಯಾಂಕ್ ಗಳಿಸಿದ್ದರು.
ಅವರನ್ನು 22-04-2024ರಂದು ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನೇಮಕಾತಿ ಪ್ರಕ್ರಿಯೆಯಲ್ಲಿ ಜವಾನ(Peon) ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಸದರಿ, ಆರೋಪಿ ಪ್ರಭು ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರು. ಇತ್ತೀಚೆಗೆ ನೇರವಾಗಿ SSLC ಬೋರ್ಡ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಆದರೆ, ಯಾವುದೇ ಶಾಲಾ ಪ್ರವೇಶವನ್ನು ಪಡೆಯದೆ, ತರಗತಿ ಹಾಜರಾಗದೆ ಸ್ಕ್ಯಾವೆಂಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು SSLC ಬೋರ್ಡ್ ಪರೀಕ್ಷೆಯಲ್ಲಿ 625 ಕ್ಕೆ 622 ಅಂಕದೊಂದಿಗೆ ರಾಂಕ್ ಪಡೆದು 99.52% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು.
ಆರೋಪಿ ಪ್ರಭು ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯನ್ನು ಓದಲು ಬರೆಯಲು ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇವರು ಅದು ಹೇಗೆ ತಾನೆ ಅತ್ಯುತ್ತಮ ಅಂಕ ಪಡೆಯಲು ಸಾಧ್ಯ ಎಂದು ಪ್ರಶ್ನಿಸಿರುವ ನ್ಯಾಯಾಧೀಶ ಹರೀಶ್, ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದ್ದಾರೆ.
ಇದು ಅನೇಕ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಗಂಭೀರ ಸ್ವರೂಪದ ಪ್ರಕರಣವಾಗಿದೆ. ಇದು ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ಮೋಸ, ನಕಲಿ ಮತ್ತು ರಾಜ್ಯದ ವಿರುದ್ಧ ಆಮಿಷ ಒಡ್ಡುವ ಪ್ರಕರಣವಾಗಿದೆ. ಇಡೀ ರಾಜ್ಯ ಮತ್ತು ವಿದ್ಯಾರ್ಥಿ ಬಾಂಧವರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 198, 200, 406, 417, 468, 471 ಮತ್ತು 124A ಅಡಿಯಲ್ಲಿ ನಡೆದಿರುವ ಶಿಕ್ಷಾರ್ಹ ಅಪರಾಧಗಳನ್ನು ದಾಖಲಿಸಲಾಗಿದೆ.