ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ ಮಂಗಳವಾರ ನಡೆಯಿತು.
ವಿದ್ಯಾರಶ್ಮಿ ಸಮೂಹ ಶಿಕ್ಷಣಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾಸಂಸ್ಥೆಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರುವಂತಹ ಕೆಲಸವನ್ನು ಮಾಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಆದರ್ಶವಾಗಿ ಇಟ್ಟುಕೊಂಡು ತಮ್ಮ ಸಾಧನೆಯನ್ನು ಮಾಡಬೇಕು. ಹಾಗೆಯೇ ಮತ್ತೊಬ್ಬರಲ್ಲಿರುವ ಒಳ್ಳೆಯತನವನ್ನು ಅನುಸರಿಸಿ ಕಲಿಯಬೇಕು ಎಂದರು.
ಮುಖ್ಯ ಅತಿಥಿಯಾಗಿ ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ, ನಿವೃತ್ತ ಉಪನ್ಯಾಸಕ ಡಾ. ಹೆಚ್ ಜಿ ಶ್ರೀಧರ್ ಮಾತನಾಡಿ, ನಾವು ನಮ್ಮ ಮನಸ್ಸಿಗೆ ಒಂದು ಚೌಕಟನ್ನು ಹಾಕಿ ಬದುಕನ್ನು ಕಟ್ಟಿಕೊಳ್ಳಬೇಕು. ಜಗತ್ತು ಬಯಸುವ ಹಾಗೆ ನಾವು ಬದುಕನ್ನು ನಡೆಸಬೇಕು ಎಂದರು.
ಇನ್ನೊರ್ವ ಅತಿಥಿ ವಿಎಂವೇರ್ ಲೀಡ್ ಡಾಟಬೇಸ್ ಆಡಳಿತಾಧಿಕಾರಿ ಮನೋಜ್ ರೈ ಮಾತನಾಡಿ, ಸತ್ಯಧರ್ಮದಲ್ಲಿ ನಾವು ಬಾಳಬೇಕು. ಜೀವನದಲ್ಲಿ ನಾವು ನಮ್ಮ ಗುರಿಯನ್ನು ತಲುಪಲು ಮಾಡುವ ಪ್ರಯತ್ನ ತಪಸ್ಸಿನಂತಿರಬೇಕು ಎಂದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹುಟ್ಟಿಕೊಳ್ಳುವಂತ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಂಡು ಗುರುಹಿರಿಯರು ಹೇಳಿರುವಂತಹ ಮಾತುಗಳನ್ನು ಆಲಿಸಿ ತಮ್ಮಲ್ಲಿ ಮೈಗೂಡಿಸಿಕೊಳ್ಳುವಂತಹ ಮನೋಭಾವ ನಮ್ಮಲ್ಲಿರಬೇಕು ಎಂದರು. ಪ್ರಾಂಶುಪಾಲ ಡಾ.ಕೆ.ನಾರಾಯಣ ಮೂರ್ತಿ ವರದಿ ವಾಚಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಪ್ರಾಂಶುಪಾಲ ಶೇಷಗಿರಿ ಎಂ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪುಷ್ಪಾವತಿ ಉಪಸ್ಥಿತರಿದ್ದರು.
ತೃತೀಯ ಬಿಕಾಂ ವಿದ್ಯಾರ್ಥಿ ಸಾಧಿಕ್ ಸ್ವಾಗತಿಸಿ, ಸ್ವಸ್ತಿ ವಂದಿಸಿದರು. ತೃತೀಯ ಬಿಎ ವಿದ್ಯಾರ್ಥಿ ಶಮೀರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯವಾಣಿ, ಅಭಿಜ್ಞ ಪ್ರಾರ್ಥಿಸಿದರು.